ಪುನರ್ವಸತಿ ಕೇಂದ್ರಗಳಿಗೆ ವಿ.ಸೋಮಣ್ಣ ಭೇಟಿ

ಮೈಸೂರು, ಏ.2:- ಮೈಸೂರು ನಗರದ ವಿವಿಧೆಡೆ ಮಹಾನಗರ ಪಾಲಿಕೆ ಹಾಗೂ ಮುಡಾ ವ್ಯಾಪ್ತಿಯಲ್ಲಿ ನಿರಾಶ್ರಿತರಿಗಾಗಿ ನಿರ್ಮಿಸಿರುವ ಪುನರ್ವಸತಿ ಕೇಂದ್ರಗಳಿಗೆ ವಸತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ನಗರದ ಸಿದ್ದಾರ್ಥ ಲೇಔಟ್ ನಲ್ಲಿರುವ ಸಿಐಟಿಬಿ ಛತ್ರ, ನಂಜರಾಜ ಬಹದ್ಧೂರ್ ಛತ್ರ ಹಾಗೂ ಯೂತ್ ಹಾಸ್ಟೆಲ್‍ಗೆ ಭೇಟಿ ನೀಡಿ, ನಿರಾಶ್ರಿತರೊಂದಿಗೆ ಮಾತನಾಡಿ, ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳ ಹಿಂದೆ ನಗರಕ್ಕೆ ಆಗಮಿಸಿದ್ದ 162 ಮಂದಿ ಕೂಲಿಕಾರ್ಮಿಕರು ರಾಜಸ್ಥಾನಕ್ಕೆ ತೆರಳುತ್ತಿದ್ದು, ಮಹಾರಾಷ್ಟ್ರದ ಗಡಿ ಬಂದ್ ಮಾಡಲಾದ ಕಾರಣ ಸಂಕಷ್ಟಕ್ಕೆ ಸಿಲುಕ್ಕಿದ್ದರು. ಅವರನ್ನು ಮಾನವೀಯತೆ ದೃಷ್ಟಿಯಿಂದ ಮೈಸೂರಿಗೆ ಕರೆತಂದು ಸಿಐಟಿಬಿ ಛತ್ರದಲ್ಲಿರಿಸಿ ಊಟೋಪಚಾರದೊಂದಿಗೆ ಆಶ್ರಯ ನೀಡಲಾಗಿದೆ ಎಂದು ತಿಳಿಸಿದರು.
ನಗರದ ನಂಜರಾಜ ಬಹದ್ಧೂರ್ ಛತ್ರದಲ್ಲಿಯೂ ಕೂಡಾ 217 ಜನರು ನಿರ್ಗತಿಕರಿಗೆ ಆಶ್ರಯ ನೀಡಲಾಗಿದೆ. ಇವರಿಗೆ ವಿವಿಧ ಸಂಘಸಂಸ್ಥೆಗಳು ನಗರ ಪಾಲಿಕೆಯೊಂದಿಗೆ ಕೈ ಜೋಡಿಸಿ, ಅಗತ್ಯ ಸೌಲಭ್ಯವನ್ನು ಒದಗಿಸುತ್ತಿವೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಯಾರೊಬ್ಬರು ಹಸಿವಿನಿಂದ ಇರಬಾರದು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.
ಕೊರೊನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಢಳಿತದೊಂದಿಗೆ ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡುತ್ತಿದ್ದಾರೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡವರು ಮತ್ತು ನಿರಾಶ್ರಿತರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಅಭಯ ನೀಡಿದರು.
ಈ ಸಂದರ್ಭದಲ್ಲಿ ಸಂಸದ ಪ್ರತಾಪಸಿಂಹ, ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಮುಡಾ ಆಯುಕ್ತ ಪಿ.ಎಸ್.ಕಾಂತರಾಜು ಸೇರಿದಂತೆ ಇತರರು ಹಾಜರಿದ್ದರು.

Leave a Comment