ಪುತ್ರಿಯ ಅಂತರ್ಜಾತಿ ವಿವಾಹ

ತಾಯಿಯ ಶವಸಂಸ್ಕಾರಕ್ಕೆ ಬಾರದ ಸಂಬಂಧಿಕರು
ಮಂಗಳೂರು, ಸೆ.೬- ಪುತ್ರಿ ಅಂತರ್ಜಾತಿಯ ಯುವಕನನ್ನು ವಿವಾಹವಾಗಿದ್ದಾಳೆ ಎಂಬ ಕಾರಣಕ್ಕೆ ಅನಾರೋಗ್ಯದಿಂದ ಮೃತಪಟ್ಟ ಆಕೆಯ ತಾಯಿಯ ಅಂತ್ಯಸಂಸ್ಕಾರಕ್ಕೆ ಸಂಬಂಧಿಕರು ಸಮೇತ ಊರವರೂ ಬಾರದ ವಿಲಕ್ಷಣ ಘಟನೆ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸಿದ್ದಕಟ್ಟೆಯ ಸುಶೀಲಮ್ಮ ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಮನೆಯವರು ಶನಿವಾರ ನಿವಾಸಕ್ಕೆ ಕೊಂಡೊಯ್ದಿದ್ದರು.
ಆದರೆ ಅಂದು ಸಂಜೆ ೪ ಗಂಟೆ ಸುಮಾರಿಗೆ ಸುಶೀಲಮ್ಮರ ಆರೋಗ್ಯದಲ್ಲಿ ಪುನಃ ಏರುಪೇರಾಗಿ ಮೃತಪಟ್ಟಿದ್ದರು. ಈ ವೇಳೆ ಮನೆಯಲ್ಲಿದ್ದವರು ಸ್ಥಳೀಯರಿಗೆ ಹಾಗೂ ಸಂಬಂಧಿಕರಿಗೆ ಮಾಹಿತಿ ನೀಡಿ, ಅಂತ್ಯಸಂಸ್ಕಾರಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದರು. ಆದರೆ ಈ ಹಿಂದೆ ಸುಶೀಲಮ್ಮರ ಪುತ್ರಿ ಅಂತರ್ಜಾತಿಯ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಸ್ಥಳೀಯರು ಹಾಗೂ ಸಂಬಂಧಿಕರು, ಸುಶೀಲಮ್ಮನ ಶವಸಂಸ್ಕಾರಕ್ಕೆ ಬಂದಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಎಸ್‌ಡಿಪಿಐ-ಪಿಎಫ್‌ಐ ಗ್ರಾಮ ಸಮಿತಿಯ ಕಾರ್ಯಕರ್ತರು ಆಂಬ್ಯುಲೆನ್ಸ್ ಮೂಲಕ ಸುಶೀಲಮ್ಮರ ಮೃತದೇಹವನ್ನ ಬಡಕಬೈಲಿನ ಸ್ಮಶಾನಕ್ಕೆ ಸಾಗಿಸಿ ಶವಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.

Leave a Comment