ಪುತ್ತೂರು: ಮತದಾನದಲ್ಲೂ ಮಹಿಳೆಯರೇ ಮೇಲುಗೈ

ಪುತ್ತೂರು, ಸೆ.೧- ಪುತ್ತೂರು ನಗರಸಭೆಗೆ ಶುಕ್ರವಾರ ನಡೆದ ಮತದಾನ ಪ್ರಕ್ರಿಯೆಯು ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಶೇ ೬೮.೬೯ ಮತದಾನವಾಗಿದೆ. ಮತದಾರರಲ್ಲಿ ಮಾತ್ರವಲ್ಲದೆ ಮತದಾನದಲ್ಲಿಯೂ ಮಹಿಳೆಯರು ಮೇಲ್ಗೈ ಸಾಧಿಸಿದ್ದಾರೆ.
ಪುತ್ತೂರು ನಗರಸಭೆಯ ೩೧ ವಾರ್ಡುಗಳಿಗೆ ಸಂಬಂಧಿಸಿ ೨೭ ಸೂಕ್ಷ್ಮ ಮತಗಟ್ಟೆಗಳು ಸೇರಿದಂತೆ ಒಟ್ಟು ೪೧ ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದೆ. ಚುನಾವಣೆಯಲ್ಲಿ ೨೦,೧೪೯ ಮಹಿಳೆಯರು ಹಾಗೂ ೧೯೫೯೬ ಪುರುಷರು ಸೇರಿ ಒಟ್ಟು ೩೯,೭೪೫ ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದರು. ಈ ಪೈಕಿ ೧೪೦೯೩ ಮಂದಿ ಮಹಿಳೆಯರು ಹಾಗೂ ೧೩೨೦೬ ಪುರುಷರು ಸೇರಿದಂತೆ ಒಟ್ಟು ೨೭೨೯೯ ಮಂದಿ ಮತದಾರರು ಮತ ಹಕ್ಕು ಚಲಾಯಿಸಿದ್ದಾರೆ.
ಬೆಳಗ್ಗೆ ೭ ಗಂಟೆಯಿಂದ ಆರಂಭಗೊಂಡು ಸಂಜೆ ೫ ಗಂಟೆಯ ತನಕ ನಡೆದ ಮತದಾನ ಪ್ರಕ್ರಿಯೆಯಲ್ಲಿ ಮತದಾರ ಪ್ರಭುಗಳು ತಮ್ಮ ಹಕ್ಕು ಚಲಾಯಿಸಿದರು. ಬೆಳಿಗ್ಗಿನ ಮತ್ತು ಸಂಜೆಯ ವೇಳೆ ಬಿರುಸಿನ ಮತದಾನ ನಡೆದಿದೆ. ಬೆಳಿಗ್ಗೆ ೯ ಗಂಟೆಯ ವೇಳೆಗೆ ಶೇ. ೧೪.೯೮ ,೧೧ ಗಂಟೆಯ ವೇಳೆಗೆ ಶೇ. ೩೮ ಶೇ., ಮಧ್ಯಾಹ್ನ ೧ ಗಂಟೆಗೆ ಶೇ. ೪೫.೦೨ ಮತದಾನವಾಗಿತ್ತು. ಮಧ್ಯಾಹ್ನ ವೇಳೆಗೆ ಮಂದಗತಿಯಲ್ಲಿ ನಡೆದಿದ್ದ ಮತದಾನ ಪ್ರಕ್ರಿಯೆ ಸಂಜೆ ವೇಳೆಗೆ ಒಂದಷ್ಟು ಬಿರುಸು ಪಡೆದುಕೊಂಡಿತ್ತು.
ಮಚ್ಚಿಮಲೆ, ಹಾರಾಡಿ, ಸಂಪ್ಯ ಶಾಲಾ ಮತಗಟ್ಟೆಯಲ್ಲಿ ಬೆಳಗ್ಗಿ ನಿಂದಲೇ ಬಿರುಸಿನ ಮತದಾನ ಪ್ರಕ್ರಿಯೆ ನಡೆದಿತ್ತು. ಆದರೆ ಸಂತ ಫಿಲೋಮಿನಾ ಮತದಾನ ಕೇಂದ್ರ ಮಧ್ಯಾಹ್ನದ ವೇಳೆ ಮತದಾರರಿಲ್ಲದೆ ಬಿಕೋ ಎನ್ನುತ್ತಿತ್ತು. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಈ ಮತದಾನ ಕೇಂದ್ರದಲ್ಲಿ ಕನಿಷ್ಠ ಮತ ಚಲಾವಣೆಯಾಗಿತ್ತು.
ವರುಣನ ಕೃಪೆ
ಕಳೆದ ಎರಡು ದಿನಗಳಲ್ಲಿ ಪುತ್ತೂರು ನಗರ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿತ್ತು. ಆದರೆ ನಿನ್ನೆ ಮಳೆಯು ಬಿಡುವು ಪಡೆದುಕೊಂಡ ಹಿನ್ನೆಲೆಯಲ್ಲಿ ಮತದಾನ ಕೇಂದ್ರಕ್ಕೆ ಬರುವ ಮತದಾರರಿಗೆ ಪೂರಕ ವಾತಾವರಣ ಲಭಿಸಿತು.
ಬಿಗಿ ಭದ್ರತೆ
ಪಾರದರ್ಶಕ ಹಾಗೂ ಶಾಂತಿಯುತ ಮತದಾನದ ಹಿನ್ನೆಲೆಯಲ್ಲಿ ಮತದಾನ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್ ನಡೆಸಲಾಗಿತ್ತು. ಮತದಾನ ಕೇಂದ್ರದ ಗೇಟಿನಿಂದ ಒಳ ಭಾಗಕ್ಕೆ ಅನಾವಶ್ಯಕ ವಾಹನಗಳು, ವ್ಯಕ್ತಿಗಳು ಬಾರದಂತೆ ನಿಗಾ ವಹಿಸಲಾಗಿತ್ತು. ನಗರಸಭಾ ವ್ಯಾಪ್ತಿಯ ೨೭ ಸೂಕ್ಷ್ಮ ಮತಗಟ್ಟೆಯಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯ ನಿಯೋಜಿಸಲಾಗಿತ್ತು.
ಶುಕ್ರವಾರ ಸಂಜೆ ಡಿ ಮಸ್ಟರಿಂಗ್ ನಡೆಯಲಿದ್ದು, ಸೆ. ೩ ರಂದು ಮತ ಎಣಿಕೆ ಕಾರ್ಯ ಪುತ್ತೂರು ತಾಲೂಕು ಕಚೇರಿಯಲ್ಲಿ ನಡೆಯಲಿದೆ.

Leave a Comment