ಪುಣೆ ವಿರುದ್ಧ ಕೊಹ್ಲಿ ಪಡೆಗೆ ಗೆಲುವು ಅನಿವಾರ್ಯ

ಪುಣೆ, ಏ.೨೯-ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್‌ಸಿಬಿ ತಂಡ ಇಂದು ಮಾಡು ಇಲ್ಲವೆ ಮಡಿ ಎಂಬ ತಂತ್ರಕ್ಕೆ ತಲೆ ಬಾಗಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಕೊಹ್ಲಿ ಪಡೆಯ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ.
ಈ ಪಂದ್ಯದಲ್ಲಿ ಸೋತರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫ್ಲೇ ಆಫ್ ಕನಸು ಕಮರಿ ಹೋಗಲಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಇಂದು ಸಂಜೆ ೪ ಗಂಟೆಗೆ ಈ ಪಂದ್ಯ ನಡೆಯಲಿದ್ದು, ಟೂರ್ನಿಯಲ್ಲಿ ೯ ಪಂದ್ಯಗಳನ್ನು ಆಡಿರುವ ಆರ್‌ಸಿಬಿ ತಂಡ ಎರಡರಲ್ಲಿ ಮಾತ್ರ ಗೆಲುವು ಕಂಡಿದೆ. ಇನ್ನೊಂದು ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.
ಒಟ್ಟು ೬ ಪಂದ್ಯಗಳಲ್ಲಿ ಸೋತಿರುವ ವಿರಾಟ್ ಕೊಹ್ಲಿ ಪಡೆ ಇಂದು ಶತಾಯಗತಾಯ ಜಯ ಸಾಧಿಸುವ ಅಗತ್ಯತೆ ಇದೆ. ಆರ್‌ಸಿಬಿ ತಂಡದಲ್ಲಿ ಬಲಿಷ್ಠ ಎನಿಸಿಕೊಂಡಿರುವ ಬ್ಯಾಟಿಂಗ್ ವಿಭಾಗವೇ ಇದುವರೆಗೂ ಟೂರ್ನಿಯಲ್ಲಿ ಒಮ್ಮೆಯೂ ಮಿಂಚಿಲ್ಲ. ಇದರಿಂದಲೇ ಆರ್‌ಸಿಬಿಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ.
ಇನ್ನು ಸ್ಮಿತ್ ನೇತೃತ್ವದ ಪುಣೆ ತಂಡ ಸಹ ಪ್ಲೇ ಆಫ್ ಏರಲು ಸಾಕಷ್ಟು ತಯಾರಿ ನಡೆಸಿದೆ. ಆರ್‌ಸಿಬಿ ವಿರುದ್ಧ ಇಂದು ನಡೆಯಲಿರುವ ಪಂದ್ಯದಲ್ಲಿ ಸ್ಮಿತ್ ಪಡೆ ವಿಜಯ ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಇರಾದೆಯಲ್ಲಿದೆ. ಇದುವರೆಗೂ ೮ ಪಂದ್ಯಗಳನ್ನು ಆಡಿರುವ ಆರ್‌ಪಿಎಸ್ ನಾಲ್ಕರಲ್ಲಿ ಗೆಲುವು ಮತ್ತು ನಾಲ್ಕರಲ್ಲಿ ಸೋಲು ಕಂಡಿದೆ.
ಸದ್ಯ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಸ್ಮಿತ್ ಪಡೆ ಕಳೆದ ಪಂದ್ಯದಲ್ಲಿ ಸೋಲು ಕಂಡಿದೆ. ಸೋಲಿನ ನೋವಿನಿಂದ ಹೊರ ಬರಲು ಸ್ಮಿತ್ ಪಡೆಗೆ ಈ ಪಂದ್ಯ ಮಹತ್ವದ್ದೆನಿಸಿದೆ. ಜೊತೆಗೆ ಪಾಯಿಂಟ್ ಪಟ್ಟಿಯಲ್ಲಿ ಮೇಲಿನ ಸ್ಥಾನಕ್ಕೇರಲು ಪುಣೆ ಈ ಪಂದ್ಯವನ್ನು ಗೆಲ್ಲಬೇಕಿದೆ.

ಮುಂಬೈ-ಗುಜರಾತ್
ಇಂದಿನ ಇನ್ನೊಂದು ಪಂದ್ಯದಲ್ಲಿ ಗುಜರಾತ್ ಲಯನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ರಾಜ್‌ಕೋಟ್‌ನಲ್ಲಿ ಇಂದು ರಾತ್ರಿ ೮ ಗಂಟೆಗೆ ಈ ಪಂದ್ಯ ಶುರುವಾಗಲಿದೆ. ಈ ಟೂರ್ನಿಯಲ್ಲಿ ಸತತ ಆರು ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಮುಂಬೈ ತಂಡ ಕಳೆದ ಪಂದ್ಯದಲ್ಲಿ ಸೋಲು ಅನುಭವಿಸಿದೆ.
ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿರುವ ರೋಹಿತ್ ಪಡೆ ಇಂದಿನ ಪಂದ್ಯದಲ್ಲಿ ಗೆದ್ದು ಪ್ಲೇ ಆಫ್ ಕಡೆ ಮತ್ತೊಂದು ದೊಡ್ಡ ಹೆಜ್ಜೆ ಇಡಲು ಸಿದ್ಧತೆ ನಡೆಸಿದೆ. ರೈನಾ ಪಡೆ ಕೂಡಾ ಅಂಕ ಪಟ್ಟಿಯ ಟಾಪ್ ೪ರ ಸ್ಥಾನದಲ್ಲಿ ಕಾಣಿಸಿಕೊಳ್ಳಬೇಕಾದರೆ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.

Leave a Comment