ಪುಟ್ಟರಂಗ ಶೆಟ್ಟಿ ಪ್ರಕರಣ-ತನಿಖೆ ಮುಗಿಯಲಿ ನೋಡೋಣ-ಸಿದ್ದರಾಮಯ್ಯ

ಹುಬ್ಬಳ್ಳಿ, ಜ.೧೨- ಯಾರೋ ಒಬ್ಬ ವ್ಯಕ್ತಿ ಬಳಿ ಹಣ ಸಿಕ್ಕರೆ ಅದು ಮಂತ್ರಿಯವರದೆ ಅಂತ ಹೇಳೋಕೆ ಹೇಗೆ ಸಾಧ್ಯ? ಸಚಿವ ಪುಟ್ಟರಂಗಶೆಟ್ಟಿ ಪ್ರಕರಣವನ್ನು ಎಸಿಬಿ ತನಿಖೆ ನಡೆಸುತ್ತಿದೆ. ತನಿಖೆ ಮುಗಿದು ವರದಿ ಬರಲಿ ನೋಡೋಣ. ಹಣ ಪುಟ್ಟರಂಗಶೆಟ್ಟಿಯವರದೇ ಅನ್ನೋದು ಊಹಾಪೋಹ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದಿಲ್ಲಿ ಹೇಳಿದರು.

ಬಾದಾಮಿಗೆ ತೆರಳುವ ಮುನ್ನ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಶೆಟ್ಟಿ ಪ್ರಕರಣದ ತನಿಖೆ ನಡೆದಿದೆ. ಅದರ ವರದಿ ಬರದೇ ಏನೋ ಹೇಳಲು ಆಗದು ಎಂದರು.

ಇನ್ನು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ನೊಂದಿಗೆ ಸೀಟು ಹಂಚಿಕೆ ಕುರಿತಂತೆ ಯಾವುದೇ ತೀರ್ಮಾನ ಆಗಿಲ್ಲ. ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ. ಕಾಂಗ್ರೆಸ್ ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸೀಟು ಹಂಚಿಕೆ ಕುರಿತಂತೆ ನೀಡಿರುವ ಹೇಳಿಕೆ ಅವರ ವಯಕ್ತಿಕ ವಿಚಾರ. ಸಭೆ ಮಾಡದೆ ಏನೋ ಹೇಳಲಾಗದು ಎಂದರು.

ಹುನ್ನಾರ

ಸಿಬಿಐ ನಿರ್ದೇಶಕ ಅಲೋಕವರ್ಮಾ ರಾಜೀನಾಮೆ ಹಿಂದೆ ದೊಡ್ಡ ಹುನ್ನಾರ ಇದೆ. ರಫೆಲ್ ಹಗರಣ ಬಯಲಾಗುತ್ತೇ ಎನ್ನುವ ಭಯದಿಂದ ನರೇಂದ್ರ ಮೋದಿಯವರ ನೇತೃತ್ವದ ಸರಕಾರ ಈ ರೀತಿ ಮಾಡಿದೆ. ವರ್ಮಾ ಅವರ ರಾಜಿನಾಮೆ ಹಿಂದೆ ಕೇಂದ್ರ ಸರಕಾರದ ಕೈವಾಡವಿದೆ ಎಂದು ಅವರು ಆರೋಪಿಸಿದರು.

ಉತ್ತರಪ್ರದೇಶದಲ್ಲಿ ಎಸ್.ಪಿ, ಬಿ.ಎಸ್.ಪಿ, ಮೈತ್ರಿ ವಿಚಾರ ಕುರಿತಂತೆ ಮಾತನಾಡಿದ ಅವರು, ಎಲ್ಲರಿಗೂ ಕೋಮುವಾದಿ ಬಿಜೆಪಿಯನ್ನು ಸೋಲಿಸುವುದೇ ಉದ್ದೇಶವಾಗಿದೆ. ಆ ಹಿನ್ನೆಲೆಯಲ್ಲಿ ಈ ಮೈತ್ರಿ ಏರ್ಪಟ್ಟಿದೆ ಎಂದರು.

ಕೇವಲ ಎರಡೇ ಪಕ್ಷಗಳು ಮೈತ್ರಿಯನ್ನು ಮಾಡಿಕೊಳ್ಳುವ ಬದಲು ಮಹಾಘಟಬಂಧನದಲ್ಲಿ ಇದ್ದರೆ ಇನ್ನೂ ಒಳ್ಳೆಯದಾಗುತ್ತಿತ್ತು ಎಂದರು.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಕುರಿತಂತೆ ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ಹೇಳಿರುವ ವಿಚಾರದಲ್ಲಿ ತಪ್ಪೇನಿದೆ. ಅಧಿಕಾರಕ್ಕೆ ಬಂದರೆ ವಿಶೇಷ ಸ್ಥಾನಮಾನ ನೀಡುತ್ತೇನೆ ಎಂದು ಹೇಳಿದ್ದಾರಷ್ಟೇ. ಈ ಹಿಂದೆ ನರೇಂದ್ರ ಮೋದಿಯವರು ಕೂಡಾ ಹೇಳಿದ್ದೀಲ್ಲವೇ ಎಂದು ಅವರು ಪ್ರಶ್ನಿಸಿದರು.

Leave a Comment