ಪಿ.ಸಿ. ಮೋಹನ್‌ಗೆ ಕೊನೆ ಕ್ಷಣದ ಕಸರತ್ತು

ಪಿ.ಸಿ. ಮೋಹನ್‌ಗೆ ಭಾರೀ ಜನ ಬೆಂಬಲ
ಬೆಂಗಳೂರು, ಏ. ೧೬- ರಾಜ್ಯದಲ್ಲಿ ನಡೆಯಲಿರುವ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ಕೇಂದ್ರ ಲೋಕಸಭಾ ಚುನಾವಣೆಯೂ ಒಂದು. ಬೆಂಗಳೂರಿನ ಹೃದಯ ಭಾಗ ಎಂದೇ ಬಿಂಬಿತವಾಗಿರುವ ಈ ಕ್ಷೇತ್ರದಲ್ಲಿ ಎರಡು ಬಾರಿ ಸಂಸದರಾಗಿ, ಮೂರನೇ ಬಾರಿಯೂ ಸಂಸದರಾಗುವ ಮೂಲಕ ಹ್ಯಾಟ್ರಿಕ್ ಬಾರಿಸುವ ವಿಶ್ವಾಸದಲ್ಲಿ ಬಿಜೆಪಿಯ ಅಭ್ಯರ್ಥಿ ಪಿ.ಸಿ. ಮೋಹನ್ ಅವರು ದಾಪುಗಾಲು ಇರಿಸಿದ್ದಾರೆ.
ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆಬೀಳಲಿರುವ ಹಿನ್ನೆಲೆಯಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಸೇರಿದಂತೆ, ವಿವಿಧೆಡೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ಮೋಹನ್ ಅವರಿಗೆ ಸಾಥ್ ನೀಡಿ ಮತಯಾಚಿಸಿದರು. ಈ ವೇಳೆ ಪಾಲಿಕೆಯ ಮಾಜಿ ಸದಸ್ಯ ಬಿ.ವಿ. ಗಣೇಶ್ ಸೇರಿದಂತೆ, ಮತ್ತಿತರರು ಇದ್ದರು.
ದೊಮ್ಮಲೂರು ವಾರ್ಡ್‌ನ ಮಾಜಿ ಪಾಲಿಕೆ ಸದಸ್ಯೆ ಗೀತಾ ಶ್ರೀನಿವಾಸ್ ರೆಡ್ಡಿ, ಪಿ.ಸಿ. ಮೋಹನ್ ಅವರನ್ನು ಬೆಂಬಲಿಸಿ ಅವರ ಪರ ಪ್ರಚಾರದಲ್ಲಿ ಪಾಲ್ಗೊಳ್ಳುವ ಜೊತೆಗೆ ಮರಳಿ, ಬಿಜೆಪಿ ಸೇರ್ಪಡೆಯಾಗಿರುವುದು ಮೋಹನ್‌ಗೆ ಆನೆಬಲ ಬಂದಂತಾಗಿದೆ.
ಈ ವೇಳೆ ಹಿರಿಯ ಮುಖಂಡ ಶ್ರೀನಿವಾಸ್ ರೆಡ್ಡಿ ಸೇರಿದಂತೆ, ಬಿಜೆಪಿಯ ಹಿರಿ-ಕಿರಿಯ ನಾಯಕರ ದಂಡೇ ಪ್ರಚಾರದಲ್ಲಿ ಪಾಲ್ಗೊಂಡಿತು. ಈ ವೇಳೆ ಮಾತನಾಡಿದ ಸಂಸದ ಪಿ.ಸಿ. ಮೋಹನ್, ಬೆಂಗಳೂರಿನ ಅಭಿವೃದ್ಧಿಗೆ ತಾವು ಎರಡು ಬಾರಿ ಸಂಸದರಾಗಿದ್ದ ಅವಧಿಯಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನ ಮಾಡುವಲ್ಲಿ ಶ್ರಮಿಸಿದ್ದೇನೆ. ಅದೇ ವಿಶ್ವಾಸದಲ್ಲಿ ಈ ಬಾರಿಯೂ ಮತದಾರರ ಮುಂದೆ ಬಂದಿದ್ದೇನೆ. ಜನ ಆಶೀರ್ವದಿಸುವರು ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಬೆಂಗಳೂರಿನ ಜನಸಂದಣಿ ಹಾಗೂ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸಬರ್‌ಬನ್ ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರದಿಂದ 17 ಸಾವಿರ ಕೋಟಿ ರೂ. ಅನುದಾನ ನಿಗದಿಪಡಿಸಲು ಯಶಸ್ವಿಯಾಗಿದ್ದೇನೆ. ಇದೂ ಅಲ್ಲದೆ, ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಯರಪ್ಪನ ಹಳ್ಳಿಯನ್ನು ಆಯ್ಕೆ ಮಾಡಿಕೊಂಡು ಅಭಿವೃದ್ಧಿಪಡಿಸಲಾಗಿದೆ. ಜೊತೆಗೆ ಕ್ಷೇತ್ರದ ವಿವಿಧ ಭಾಗಗಳಲ್ಲಿ ಶೌಚಗೃಹ, ಶಾಲಾ ಕಾಂಪೌಂಡ್ ಸೇರಿದಂತೆ, ಹತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡು ಜನರ ಮನ ಗೆದ್ದಿದ್ದೇನೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು 5 ವರ್ಷಗಳ ಕಾಲ ಅಭಿವೃದ್ಧಿ ಕೆಲಸ ಕಾರ್ಯಗಳೇ ತಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

Leave a Comment