ಪಿಹೆಚ್‍ಸಿ ವೈದ್ಯರ ಹುದ್ದೆ ತೆರವಾದ ತಕ್ಷಣ ಭರ್ತಿಗೆ ಕ್ರಮ ಜರುಗಿಸಬೇಕು : ಜಿಲ್ಲಾಧಿಕಾರಿ

ದಾವಣಗೆರೆ ಡಿ.7; ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವÀ ವೈದ್ಯರ ಹುದ್ದೆಗಳಿಗೆ ಎನ್‍ಹೆಚ್‍ಎಂ ಮತ್ತು ಸಾಧ್ಯವಿರುವ ಇತರೆ ವಿಧಾನದ ಮೂಲಕ ಕೂಡಲೇ ಅರ್ಜಿ ಆಹ್ವಾನಿಸಿ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳಬೇಕೆಂದು ಡಿಹೆಚ್‍ಓ ಅವರಿಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೂಚಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆದ ಪಿ.ಸಿ & ಪಿ.ಎನ್.ಡಿ.ಟಿ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರಾಜೀನಾಮೆ ಇತರೆ ಕಾರಣಗಳಿಂದ ತೆರವಾಗುವ ವೈದ್ಯರ ನೇಮಕಾತಿಯನ್ನು ಎನ್‍ಹೆಚ್‍ಎಂ ಅಡಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಆ ಹುದ್ದೆಗಳನ್ನು ಶೀಘ್ರವಾಗಿ ಅರ್ಜಿ ಆಹ್ವಾನಿಸಿ ತುಂಬಬೇಕು. ಆರೋಗ್ಯ ರಕ್ಷಾ ಸಮಿತಿಯಲ್ಲೇ ಅನುಮೋದನೆಯಾಗಬೇಕೆಂದು ಸಭೆ ಆಗುವವರೆಗೆ ಕಾಯದೇ ಘಟನೋತ್ತರ ಅನುಮೋದನೆ ಪಡೆಯುವುದರೊಂದಿಗೆ ನೇಮಕಾತಿ ಮಾಡಿಕೊಳ್ಳಬೇಕು. ಆಡಳಿತಾತ್ಮಕ ಕಾರಣ ಹೇಳುತ್ತಾ ವಿಳಂಬಿಸಬಾರದೆಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತ್ರಿಪುಲಾಂಬ ಮಾತನಾಡಿ, ಕೆಪಿಎಂಇ ಅಡಿ ನೋಂದಣ ಗೆ ಜಿಲ್ಲೆಯಲ್ಲಿ ಪ್ರಸ್ತುತ ಮೂರು ಅರ್ಜಿಗಳು ಬಂದಿವೆ. ನವೀಕರಣಕ್ಕಾಗಿ 4 ಅರ್ಜಿಗಳು ಬಂದಿವೆ. ಪಿ.ಸಿ & ಪಿ.ಎನ್.ಡಿ.ಟಿ ಸಮಿತಿಯಿಂದ ನಿಯಮಿತವಾಗಿ ಜಿಲ್ಲೆಯಲ್ಲಿ ಆರೋಗ್ಯ ಸಂಸ್ಥೆಗಳ ಪರಿವೀಕ್ಷಣೆಗಳು ನಡೆಯುತ್ತಿವೆ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಗಂಗಾಧರ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಇದುವರೆಗೆ 48 ಹೆಚ್1ಎನ್1 ಪಾಸಿಟಿವ್ ಪ್ರಕರಣಗಳ ಪೈಕಿ ಮೂರು ಸಾವು ಸಂಭವಿಸಿದೆ. 2017 ರಲ್ಲಿ 80 ಪಾಸಿಟಿವ್ ಪ್ರಕರಣ ದಾಖಲಾಗಿತ್ತು. ದಾವಣಗೆರೆಯಲ್ಲಿ 21 ಅತಿ ಹೆಚ್ಚು ಪ್ರಕರಣ ದಾಖಲಾಗಿದ್ದರೆ ಹರಿಹರ 4, ಚನ್ನಗಿರಿ 11, ಹರಪನಹಳ್ಳಿ 6 ಮತ್ತು ಹೊನ್ನಾಳಿಯಲ್ಲಿ 6 ಸೇರಿದಂತೆ ಒಟ್ಟು 48 ಪಾಸಿಟಿವ್ ಪ್ರಕರಣ ಇಲ್ಲಿಯವರೆಗೆ ಕಂಡುಬಂದಿದೆ.

ಸಕ್ಕರೆ ಕಾಯಿಲೆ, ಹೈಪರ್‍ಟೆನ್ಶನ್‍ನಂತಹ ನಾನ್ ಕಮ್ಯುನಿಕೇಬಲ್ ಡಿಸೀಸ್ ಕಾರ್ಯಕ್ರಮದಡಿ ಇದುವರೆಗೆ 22230 ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ರಾಷ್ಟ್ರೀಯ ತಂಬಾಕು ಕಾರ್ಯಕ್ರಮದಡಿ ಸಿಬ್ಬಂದಿಗಳು ನಿಯೋಜನೆಗೊಂಡಿದ್ದು, ತಂಬಾಕು ನಿಯಂತ್ರಣ ಕುರಿತು ಜಿಲ್ಲೆಯ ನೂರು ಶಾಲೆಗಳಲ್ಲಿ ಐಇಸಿ ಚಟುವಟಿಕೆ ಗುರಿ ಹೊಂದಲಾಗಿದೆ. ತಂಬಾಕು ನಿಯಂತ್ರಣ ತಂಡದಿಂದ ಈ ಸಾಲಿನಲ್ಲಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ನಡೆಸಿದ ದಾಳಿಗಳಲ್ಲಿ 225 ಪಪ್ರಕರಣಗಳನ್ನು ದಾಖಲಿಸಿ ರೂ. 27200 ದಂಡ ವಸೂಲು ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಬೋರ್, ನಲ್ಲಿಗಳಲ್ಲಿನ ನೀರಿನಲ್ಲಿನ ಮಾಲಿನ್ಯ ಮಟ್ಟವನ್ನು ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳುಹಿಸಲಾದ ಒಟ್ಟು 737 ಸ್ಯಾಂಪಲ್‍ಗಳಲ್ಲಿ 717 ಯೋಗ್ಯ ಹಾಗೂ 20 ಯೋಗ್ಯವಲ್ಲದ್ದೆಂದು ವರದಿ ಬಂದಿದೆ. ಈ ಮಾಹಿತಿಯನ್ನು ಸ್ಥಳೀಯ ಸಂಸ್ಥೆಗಳಿಗೆ ಕಳುಹಿಸಲಾಗಿದ್ದು ಅವರು ಆ ನೀರಿನ ಮೂಲಗಳಿಗೆ ಅಗತ್ಯವಾದ ಕ್ಲೋರಿನೇಷನ್ ಇತರೆ ಕ್ರಮ ಕೈಗೊಳ್ಳುವರು ಎಂದರು.

 ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಈ ಯೋಗ್ಯವಲ್ಲದ ನೀರು ಇರುವ ಪ್ರದೇಶಗಳ ಮಾಹಿತಿ ನೀಡಿದಲ್ಲಿ ತಾವು ಪರಿಶೀಲಿಸಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಪರಿವೀಕ್ಷಿಸುವುದಾಗಿ ಹೇಳಿದರು.

 ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಮೀನಾಕ್ಷಿ ಮಾತನಾಡಿ, 2018 ನೇ ಸಾಲಿನಲ್ಲಿ ಡೆಂಗ್ಯು ಸೋಂಕಿನಿಂದ ಯಾರೂ ಮರಣ ಹೊಂದಿಲ್ಲ. ಆದರೆ 2017 ರಲ್ಲಿ 3 ಮರಣ ಸಂಭವಿಸಿತ್ತು. ಚಿಕುನ್‍ಗುನ್ಯದಿಂದ ಜಗಳೂರಿನಲ್ಲಿ ಒಂದು ಮರಣ ಸಂಭವಿಸಿದೆ. 2017 ರಲ್ಲಿ 3787 ಸಂಶಯಾಸ್ಪದ ಡೆಂಗ್ಯು ಪ್ರಕರಣಗಳಲ್ಲಿ 972 ಪಾಸಿಟಿವ್ ಇತ್ತು. 2018 ರಲ್ಲಿ 851 ಸಂಶಯಾಸ್ಪದ ಪ್ರಕರಣಗಳಲ್ಲಿ 123 ಪ್ರಕರಣ ಪಾಸಿಟಿವ್ ಇದೆ.

ಈ ಸಾಲಿನ ಅಕ್ಟೋಬರ್ ಅಂತ್ಯದವರೆಗೆ 12 ಮಲೇರಿಯಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಕಳೆದ ಬಾರಿ 18 ಪ್ರಕರಣಗಳಿದ್ದವು. ಕಳೆದ ಸಾಲಿನಲ್ಲಿ ಮಳೆ ಕೊರತೆಯಿಂದ ಡೆಂಗ್ಯು ಮತ್ತು ಚಿಕುನ್‍ಗುನ್ಯ ಪ್ರಕರಣ ಹೆಚ್ಚಿತ್ತು. ನಗರ ಪ್ರದೇಶದಲ್ಲಿ ಸೋಂಕು ಪ್ರಕರಣಗಳು ಹೆಚ್ಚು ಕಂಡುಬರುತ್ತಿದ್ದು, ಐಇಸಿ, ಇತರೆ ಚಟುವಟಿಕೆಗೆ ಸಿಬ್ಬಂದಿ ಕೊರತೆಯೂ ಇದಕ್ಕೆ ಕಾರಣವಾಗಿದೆ. ಈ ಸೋಂಕುಗಳ ನಿಯಂತ್ರಣಕ್ಕೆ ನಗರ ಮತ್ತು ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಆರ್‍ಸಿಹೆಚ್ ಅಧಿಕಾರಿ ಡಾ.ಶಿವಕುಮಾರ್ ಮಾತನಾಡಿ, ಈ ಸಾಲಿನಲ್ಲಿ ಜಿಲ್ಲೆಯ 14764 ಜೀವಂತ ಮಗು ಜನನಕ್ಕೆ 8 ತಾಯಿ ಮರಣ ಸಂಭವಿಸಿದ್ದು ಎಂಎಂಆರ್(ತಾಯಿ ಮರಣ ಪ್ರಮಾಣ) 54 ಇದೆ. ಹಾಗೂ ಐಎಂಆರ್ (ಶಿಶು ಮರಣ ಪ್ರಮಾಣ) 16 ಇದೆ. ತಾಯಿ ಮರಣ ಮತ್ತು ಶಿಶು ಮರಣ ಪ್ರಮಾಣವನ್ನು ತಗ್ಗಿಸಲು ಕೈಗೊಳ್ಳಬಹುದಾದ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಪ್ರತಿರಕ್ಷಣಾ ಲಸಿಕಾ ಕಾರ್ಯಕ್ರಮದಲ್ಲಿ ಈವರೆಗೆ ಶೇ. 99 ಗುರಿ ಸಾಧಿಸಲಾಗಿದೆ ಎಂದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕಾರಾಧ್ಯ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಅಕ್ಟೋಬರ್‍ವರೆಗೆ 8696 ಮಹಿಳೆಯರಿಗೆ ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ ಹಾಗು 5 ಪುರಷರಿಗೆ ವ್ಯಾಸಕ್ಟಮಿ ಶಸ್ತ್ರಚಿಕಿತ್ಸೆ ನಡೆಸಿ ಶೇ. 95.4 ಗುರಿ ಸಾಧಿಸಲಾಗಿದೆ ಎಂದರು.

ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ. ಗಂಗಂ ಸಿದ್ದರೆಡ್ಡಿ ಮಾತನಾಡಿ, ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಚಿಗಟೇರಿ ಆಸ್ಪತ್ರೆಯಲ್ಲಿ ಅಕ್ಟೋಬರ್ ಮಾಹೆವರೆಗೆ 2640 ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದರು.

ಜಿಲ್ಲಾಧಿಕಾರಿಗಳು ಮಾತನಾಡಿ, ಚನ್ನಗಿರಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆ ಪ್ರಮಾಣ ಸೇರಿದಂತೆ ಇತÀರೆ ವಿಷಯದಲ್ಲೂ ಪ್ರಗತಿ ಕುಂಠಿತವಾಗಿದೆ. ಚನ್ನಗಿರಿ ತಾಲ್ಲೂಕು ವೈದ್ಯಾಧಿಕಾರಿಗಳ ನಿಯಮಿತವಾಗಿ ತಮ್ಮ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ, ಪ್ರಗತಿ ಪರಿಶೀಲಿಸಿ ಕುಂದು ಕೊರತೆಗಳ ಕುರಿತು ಕ್ರಮ ವಹಿಸಬೇಕೆಂದರು. ಹಾಗೂ ಎಲ್ಲ ಆರೋಗ್ಯ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು ವಿವಿಧ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಿಗದಿತ ಅವಧಿಯೊಳಗೆ ಅನುಷ್ಟಾನಗೊಳಿಸಿ ಪ್ರಗತಿ ಸಾಧಿಸಬೇಕೆಂದರು.

ಸಭೆಯಲ್ಲಿ ಕುಷ್ಟರೋಗ ನಿಯಂತ್ರಣ, ಕ್ಷಯರೋಗ ನಿಯಂತ್ರಣ, ಅಂಧ ನಿವಾರಣೆ ಕಾರ್ಯಕ್ರಮ ಸೇರಿದಂತೆ ವಿವಿಧ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಲಾಯಿತು. ಸಭೆಯಲ್ಲಿ ಎಲ್ಲಾ ತಾಲ್ಲೂಕುಗಳ ಆರೋಗ್ಯಾಧಿಕಾರಿಗಳು, ಎಸ್‍ಎಸ್‍ಐಎಂಎಸ್ ನ ಡಾ.ಕಾಳಪ್ಪನವರ್, ಡಾ. ಸರ್ವಮಂಗಳ, ವಿನುತಾ ರವಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.

Leave a Comment