ಪಿಸ್ತೂಲ್ ತೋರಿಸಿ ಬೆದರಿಸಿ ಕಾರು ಚಾಲಕನ ಸುಲಿಗೆ

ಬೆಂಗಳೂರು,ಜ.೨೧-ಅಮೆಜಾನ್ ಕಂಪನಿಯ ಕಾರು ಚಾಲಕನನ್ನು ಅಡ್ಡಗಟ್ಟಿ ದೊಣ್ಣೆಯಿಂದ ಹೊಡೆದು ತಲೆ ಹಾಗೂ ಹೊಟ್ಟೆಗೆ ಪಿಸ್ತೂಲ್ ಇಟ್ಟು ಬೆದರಿಸಿ ಕಾರು,ನಗದು ೩ ಮೊಬೈಲ್‌ಗಳನ್ನು ಆರೇಳು ಮಂದಿ ದುಷ್ಕರ್ಮಿಗಳು ದೋಚಿ ಪರಾರಿಯಾಗಿರುವ ದುರ್ಘಟನೆ ಪೀಣ್ಯದ ತಿಪ್ಪೇನಹಳ್ಳಿ ಬಳಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ಅಮೆಜಾನ್ ಕಂಪನಿಯಲ್ಲಿ ರಾತ್ರಿ ಪಾಳಿ ಮುಗಿಸಿಕೊಂಡು ಕೆಲಸ ಮಾಡುತ್ತಿದ್ದ ಗಿರೀಶ್ ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ರಾತ್ರಿ ೧೨.೪೫ರ ವೇಳೆ ತಿಪ್ಪೇನಹಳ್ಳಿಯ ಮನೆಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಇಟಿಯೋಸ್ ಕಾರ್‌ನಲ್ಲಿ ಬಂದ ಆರೇಳು ಮಂದಿ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿದ್ದಾರೆ.
ಕಾರು ಚಾಲಕನನ್ನು ಗಿರೀಶ್‌ನನ್ನು ಕೆಳಗಿಳಿಸಿ, ಆತನ ತಲೆ ಹಾಗೂ ಹೊಟ್ಟೆಗೆ ಪಿಸ್ತೂಲ್ ಇಟ್ಟು ಬೆದರಿಸಿ ದೊಣ್ಣೆಯಿಂದ ಹಲ್ಲೆ ನಡೆಸಿ ಆತನ ಬಳಿಯಿದ್ದ ೧೬.೫೦೦ ರೂ ನಗದು ೩ ಮೊಬೈಲ್‌ಗಳನ್ನು ಕಾರನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ಬಳಿಕ ಗಾಯಾಳು ಗಿರೀಶ್ ಸ್ಥಳೀಯರ ಸಹಾಯದಿಂದ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದು ತಕ್ಷಣವೇ ಪೀಣ್ಯ ಮತ್ತು ರಾಜಗೋಪಾಲನಗರ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಕಳ್ಳತನ ಮಾಡಿದ್ದ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಕಾರು ಚೇಸ್ ಮಾಡುವ ವೇಳೆ ಶ್ರೀನಿವಾಸ್ ಮತ್ತು ಸಿದ್ಧಲಿಂಗಮೂರ್ತಿ ಎಂಬ ಇಬ್ಬರು ಪೇದೆಗಳಿಗೆ ಗಾಯವಾಗಿದೆ ಕಳ್ಳರ ಗ್ಯಾಂಗ್ ಸೋಲದೇವನಹಳ್ಳಿ ಬಳಿ ಕಾರು ಬಿಟ್ಟು ಪರಾರಿಯಾಗಿದ್ದು, ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

Leave a Comment