ಪಿಯುಸಿ ಪೂರಕ ಪರೀಕ್ಷೆ – ಮರುಮೌಲ್ಯಮಾಪನ ದ ಮಾಹಿತಿ

ಬೆಂಗಳೂರು, ಏ.15 -ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂನ್‍ನಲ್ಲಿ ಪೂರಕ ಪರೀಕ್ಷೆ ನಡೆಯುತ್ತಿದ್ದು, ಶುಲ್ಕ ಪಾವತಿಸಲು ಏ.30 ಕೊನೆಯ ದಿನವಾಗಿದೆ ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂರಕ ಪರೀಕ್ಷೆಗೆ ಒಂದು ವಿಷಯಕ್ಕೆ 140, 2 ವಿಷಯಕ್ಕೆ 270, ಮೂರು ಅಥವಾ ಹೆಚ್ಚಿನ ವಿಷಯಗಳಿಗೆ 400 ರೂ.ಗಳು ಶುಲ್ಕ ನಿಗದಿಯಾಗಿದೆ. ಎಸ್-ಎಸ್ಟಿ ಪ್ರವರ್ಗ 1ರ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಶುಲ್ಕ 50 ರೂ. ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಎಲ್ಲಾ ವಿಷಯಗಳನ್ನು ತಿರಸ್ಕರಿಸಿ ಮತ್ತೊಮ್ಮೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪ್ರಥಮ ಪ್ರಯತ್ನದವರಿಗೆ 175, ದ್ವಿತೀಯ ಹಾಗೂ ಅಂತಿಮ ಪ್ರಯತ್ನಕ್ಕೆ 350 ರೂ. ಶುಲ್ಕ ನಿಗದಿಯಾಗಿದೆ.

ಅನುತ್ತೀರ್ಣರಾದ ವಿದ್ಯಾರ್ಥಿಗಳಿಂದ ಶುಲ್ಕ ಕಟ್ಟಿಸಿಕೊಳ್ಳಲು ಒಎಂಆರ್ ಅರ್ಜಿಗಳಿಗಾಗಿ ಕಾಯಬೇಕಾದ ಅಗತ್ಯವಿಲ್ಲ. ಫಲಿತಾಂಶ ಪಟ್ಟಿ ಆಧಾರದ ಮೇಲೆ ಅನುತ್ತೀರ್ಣ ವಿಷಯಗಳಿಗೆ ನಿಯಮಾನುಸಾರ ಪರೀಕ್ಷಾ ಶುಲ್ಕ ಕಟ್ಟಿಸಿಕೊಳ್ಳಬಹುದು.

ಅನುತ್ತೀರ್ಣ ಒಎಂಆರ್ ಅರ್ಜಿಗಳು ಕಾಲೇಜಿಗೆ ತಲುಪಿದ ಕೂಡಲೇ ಶುಲ್ಕ ಕಟ್ಟಿದ ಒಎಂಆರ್ ಅರ್ಜಿಗಳನ್ನು ಭರ್ತಿ ಮಾಡಿ ಉಪನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು ಎಂದು ಹೇಳಿದರು.

2018ರ ಜೂನ್ ದ್ವಿತೀಯ ಪಿಯುಸಿ ಪರೀಕ್ಷೆ ಹಾಗೂ ಅದಕ್ಕೂ ಹಿಂದಿನ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಂದ ಮೂಲ ಒಎಂಆರ್ ಅಥವಾ ಹಿಂದಿನ ಎಂಸಿಎ ಆಧಾರದ ಮೇಲೆ ಪರೀಕ್ಷಾ ಶುಲ್ಕ ಕಟ್ಟಿಸಿಕೊಳ್ಳಬಹುದು. ಅನುತ್ತೀರ್ಣರಾದ ವಿದ್ಯಾರ್ಥಿಗಳು ಫಲಿತಾಂಶ ತಿರಸ್ಕರಿಸಿ ಹೊಸದಾಗಿ ಪರೀಕ್ಷೆ ಬರೆಯಲು ಇಚ್ಛಿಸಿದಲ್ಲಿ ಮೂಲ ಅನುತ್ತೀರ್ಣ ಒಎಂಆರ್ ಪಡೆದುಕೊಂಡ ನಂತರವೇ ಕ್ರಮವಹಿಸಬೇಕು.

2018ರ ಮಾರ್ಚ್, ಜುಲೈ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಫಲಿತಾಂಶ ತಿರಸ್ಕರಿಸಿ ಮತ್ತೊಮ್ಮೆ ಪೂರಕ ಪರೀಕ್ಷೆ ಬರೆಯಲಿಚ್ಛಿಸಿದರೆ ಮೂಲ ಅಂಕ ಪಟ್ಟಿಗಳ ಆಧಾರದ ಮೇಲೆ ನಿಯಮಾನುಸಾರ ಫಲಿತಾಂಶ ತಿರಸ್ಕರಣೆಗೆ ಅವಕಾಶ ನೀಡಬಹುದಾಗಿದೆ.

ಕಾಲೇಜಿನವರು ಪರೀಕ್ಷಾ ಶುಲ್ಕವನ್ನು ಖಜಾನೆಗೆ ಒಂದೇ ಕಂತಿನಲ್ಲಿ ಮೇ 2ರೊಳಗೆ ಸಂದಾಯ ಮಾಡಬೇಕು. ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲು ಮತ್ತು ಅದನ್ನು ವೆಬ್‍ಸೈಟ್‍ನಲ್ಲಿ ಏ.30ರೊಳಗೆ ಅಪ್‍ಡೇಟ್ ಮಾಡಬೇಕಿದೆ. ಕಾಲೇಜಿನವರು ಮೇ 4ರೊಳಗೆ ಅರ್ಜಿಗಳನ್ನು ಮೂಲ ಚಲನ್ ಸಹಿತ ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಕಡ್ಡಾಯವಾಗಿ ಸಲ್ಲಿಸಬೇಕಿದೆ ಎಂದರು.

ಭಾವಚಿತ್ರದಲ್ಲಿರುವ ನ್ಯೂನ್ಯತೆಯನ್ನು ಸರಿಪಡಿಸಲು ಏ.16 ರಿಂದ 30ರವರೆಗೆ ಆನ್‍ಲೈನ್ ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಪ್ರತಿಗಾಗಿ ಏ.18 ರಿಂದ 29ರ ನಡುವೆ ಅರ್ಜಿ ಸಲ್ಲಿಸಬಹುದು.

ಏ.27 ರಿಂದ ಮೇ 6ರ ನಡುವೆ ಡೌನ್‍ಲೋಡ್ ಮಾಡಿಕೊಳ್ಳಬಹುದು. ಏ.29 ರಿಂದ ಮೇ 8 ನಡುವೆ ಮರುಮೌಲ್ಯಮಾಪನ ಮತ್ತು ಮರು ಎಣಿಕೆಗಾಗಿ ಅರ್ಜಿ ಸಲ್ಲಿಸಬಹುದು. ಸ್ಕ್ಯಾನಿಂಗ್ ಪ್ರತಿ ಪಡೆದುಕೊಳ್ಳಲು ಪ್ರತಿ ವಿಷಯಕ್ಕೆ 530, ಮರುಮೌಲ್ಯಮಾಪನ ಶುಲ್ಕ ಪ್ರತಿ ವಿಷಯಕ್ಕೆ 1670 ರೂ.ಗಳನ್ನು ಪಾವತಿಸಬೇಕಿದೆ. ಪತ್ರಿಕಾಗೋಷ್ಠಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ಸಿ.ಶಿಖಾ ಉಪಸ್ಥಿತರಿದ್ದರು.

  • ಮರುಮೌಲ್ಯಮಾಪನ ಶುಲ್ಕ ವಿವರ :
  • ಉತ್ತರ ಪತ್ರಿಕೆಯ ಸ್ಕಾನಿಂಗ್ ಪ್ರತಿಗಾಗಿ ಅರ್ಜಿ ಸಲ್ಲಿಕೆ- ಏ.17ರಿಂದ 29ರವರೆಗೆ
  • ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಡೌನ್‍ಲೌಡ್‍ಗೆ -ಏ.27ರಿಂದ ಮೇ6ರವರೆಗೆ
  • ಮರುಮೌಲ್ಯಮಾಪನ ಹಾಗೂ ಅರ್ಜಿ ಸಲ್ಲಿಕೆ- 29ರಿಂದ ಮೇ. 8ರವರೆಗೆ
  • ಸ್ಕ್ಯಾನಿಂಗ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ- 530
  • ಮರುಮೌಲ್ಯಮಾಪನ ಶುಲ್ಕ -1670

Leave a Comment