ಪಿಓಪಿ ಗಣೇಶ ಸಾಗಾಣೆಗೆ ಕಡಿವಾಣ

ಬೆಂಗಳೂರು, ಆ. ೧೬- ಮಹಾರಾಷ್ಟ್ರ, ಆಂದ್ರಪ್ರದೇಶ ರಾಜ್ಯಗಳ ಗಡಿಭಾಗಗಳಿಂದ ಬೆಂಗಳೂರು ನಗರ ಒಳಗೊಂಡಂತೆ ರಾಜ್ಯಕ್ಕೆ ಪಿಓಪಿ ಗಣೇಶ ಮೂರ್ತಿಗಳು ಪ್ರವೇಶಿಸುವಂತೆ ಸಾಗಾಣೆಗೆ ಕಡಿವಾಣಬೇಕೆಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪತ್ರ ಬರೆದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಬಿಬಿಎಂಪಿ, ಬೆಸ್ಕಾಂ, ಕಂದಾಯ ಇಲಾಖೆ, ನಗರ ಜಿಲ್ಲೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ಕೆ. ಸುಧಾಕರ್ ಅವರು ಸುದ್ಧಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ಈ ಬಾರಿ ಪಿಓಪಿ ಗಣೇಶ ಮೂರ್ತಿಗಳಿಗೆ ಕಡಿವಾಣ ಹಾಕಿ ಮಣ್ಣಿನ ಗಣೇಶ ಮೂರ್ತಿಗಳನ್ನು ಆರಾಧಿಸುವಂತೆ ನಾಗರಿಕರಲ್ಲಿ ಜಾಗೃತಿ ಉಂಟು ಮಾಡಲಾಗುವುದು ಎಂದು ತಿಳಿಸಿದರು.

ಸಾರಿಗೆ ಬಸ್‌ಗಳಲ್ಲಿ ಪಿಓಪಿ ಗಣೇಶ ಮೂರ್ತಿಗಳನ್ನು ಸಾಗಾಣೆ ಮಾಡದಂತೆ ಕ್ರಮ ಕೈಗೊಳ್ಳಬೇಕೆಂದು ಸಾರಿಗೆ ಇಲಾಖೆ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಲಾಗುವುದು ಎಂದು ತಿಳಿಸಿದರು. ಬೆಂಗಳೂರು ನಗರದಲ್ಲಿ ಪಿಓಪಿ ಗಣೇಶ ಮೂರ್ತಿಗಳನ್ನು ಇಡಲಾಗಿದ್ದ ಮಳಿಗೆಗಳ ಮೇಲೆ ದಾಳಿ ನಡೆಸಿ ಈವರೆಗೆ 168 ಗಣೇಶ ಮೂರ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕುಂಬಳಗೋಡಿನಲ್ಲಿ ಪಿಓಪಿ ಗಣೇಶ ಮೂರ್ತಿಗಳನ್ನು ಸಂಗ್ರಹಿಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅವುಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ನಗರದಲ್ಲಿ ಈ ಬಾರಿ 100ಕ್ಕೂ ಹೆಚ್ಚು ಮೊಬೈಲ್ ವಾಹನಗಳನ್ನು ಗಣೇಶ ಮೂರ್ತಿಗಳ ವಿಸರ್ಜನೆಗೆ ಎಲ್ಲಾ ವಾರ್ಡ್‌ಗಳಲ್ಲಿ ಇಡಲಾಗುವುದು ಎಂದು ಹೇಳಿದರು. ಈ ಬಾರಿ 10 ವಾಹನಗಳನ್ನು ಸಿಂಗರಿಸಿ ನಾಡಿನ ಸಂಸ್ಕೃತಿ, ಗಣೇಶ ಹಬ್ಬದ ಪ್ರಾಮುಖ್ಯತೆ ಇತಿಹಾಸ ಸಾರುವಂತಹ ಸ್ಥಬ್ದ ಚಿತ್ರಗಳನ್ನು ನಗರದಲ್ಲೆಡೆ ಕೊಂಡೊಯ್ಯಲಾಗುವುದು ಎಂದು ಹೇಳಿದರು.

ನಗರದಲ್ಲಿ ಪಿಓಪಿ ಗಣೇಶ ಮೂರ್ತಿಗಳನ್ನು ಖರೀದಿಸಬೇಕು ಎಂದು ನಿವಾಸಿಗಳು ಮತ್ತು ಸಂಘಸಂಸ್ಥೆಗಳ ಮುಖ್ಯಸ್ಥರಲ್ಲಿ ಸುಧಾಕರ್ ಅವರು ಮನವಿ ಮಾಡಿದರು. ಬಿಬಿಎಂಪಿ ಘನತ್ಯಾಜ್ಯ ವಿಭಾಗಗಳ ಜಂಟಿ ಆಯುಕ್ತ ಸರ್ಪ್‌ರಾಜ್ ಖಾನ್ ಹಾಗೂ ಬೆಸ್ಕಾಂ, ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment