ಪಿಎಫ್‍ಐ ನಿಷೇಧಿಸಲು ರಾಜ್ಯ ಸರ್ಕಾರದಿಂದ ಪ್ರಕ್ರಿಯೆ ಆರಂಭ

ಬೆಂಗಳೂರು, ಜ 18- ರಾಜ್ಯದಲ್ಲಿ ಭಯೋತ್ಪಾದಕ ಮತ್ತು ಸಮಾಜವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿವೆ ಎನ್ನಲಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ದಂತಹ ಸಂಘಟನೆಗಳನ್ನು ನಿಷೇಧಿಸುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ.

‘ಪಿಎಫ್‍ಐ ನಂತಹ ಸಂಘಟನೆಗಳ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಪೊಲೀಸರಿಗೆ ಸೂಚಿಸಲಾಗಿದೆ. ಇದರಿಂದ ಕೇಂದ್ರಕ್ಕೆ ಅಗತ್ಯ ಮಾಹಿತಿಯನ್ನು ಕಳುಹಿಸಬಹುದಾಗಿದೆ.’ ಎಂದು ಗೃಹ ಸಚಿವರ ಬಸವರಾಜ್ ಬೊಮ್ಮಾಯಿ ಶುಕ್ರವಾರ ಸಂಜೆ ತಿಳಿಸಿದ್ದಾರೆ.

ಈ ಕ್ರಮಗಳು ಪಿಎಫ್‍ಐ ಮತ್ತು ಎಸ್‍ಡಿಪಿಐ (ಸೋಷಿಯಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಇಂಡಿಯಾ) ಸಂಘಟನೆಗಳಿಗೆ ಸೀಮಿತವಾಗದೆ, ಇಂತಹ ಚಟುವಟಿಕೆಗಳಲ್ಲಿ ತೊಡಗಿರುವ ಯಾವುದೇ ಸಂಘಟನೆಗಳಿಗೆ ಅನ್ವಯಿಸುತ್ತವೆ.

ತಮಿಳುನಾಡಿನಲ್ಲಿ ವಿಶೇಷ ಸಬ್ ಇನ್ಸ್‍ಪೆಕ್ಟರ್ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಬೇಕಾಗಿದ್ದ ಹಾಗೂ ಕೇರಳದಲ್ಲಿನ ಕೆಲ ಇಸ್ಲಾಮಿಕ್ ಸ್ಟೇಟ್ ಕಾರ್ಯಕರ್ತರೊಂದಿಗೆ ನಂಟು ಹೊಂದಿದ್ದಾರೆನ್ನಲಾದಿ ಇಬ್ಬರು ವ್ಯಕ್ತಿಗಳನ್ನು ಜ 14ರಂದು ಉಡುಪಿ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಉತ್ತರ ಪ್ರದೇಶದಾದ್ಯಂತ ನಡೆದ ಹಿಂಸಾಚಾರ ಪ್ರಕರಣಗಳಲ್ಲಿ ಪಾತ್ರವಹಿಸಿರುವ ಬಗ್ಗೆ ಶಂಕೆ ಇರುವ ಪಿಎಫ್‍ಐ ಸಂಘಟನೆಯನ್ನು ನಿಷೇಧಿಸುವಂತೆ ಆ ರಾಜ್ಯದ ಪೊಲೀಸರು ಕೋರಿದ್ದರು.

‘ಪಿಎಫ್‍ಐ ನಂತಹ ಸಂಘಟನೆಗಳ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಮತ್ತು ಸಂಘಟನೆಯನ್ನು ನಿಷೇಧಿಸುವ ಕುರಿತು ಎಲ್ಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.’ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲಿನ ದಾಳಿ ಹಾಗೂ ಹಿಂದೂ ಕಾರ್ಯಕರ್ತರ ಹತ್ಯೆಗಳ ಪ್ರಕರಣಗಳ ಬಗ್ಗೆ ಪ್ರಸ್ತಾಪಿಸಿದ  ಸಚಿವರು, ಇಂತಹ ಸಂಘಟನೆಗಳಿಂದ ಅನೇಕ ಬಾರಿ ಹಿಂಸಾಚಾರ ಮತ್ತು ಅಶಾಂತಿ ಉಂಟು ಮಾಡುವ ಪ್ರಯತ್ನಗಳು ನಡೆದಿವೆ ಎಂದು ಹೇಳಿದ್ದಾರೆ.

Leave a Comment