ಪಿಎಫ್‌ಐ ಬ್ಯಾನರ್ ತೆರವು

ಉಳ್ಳಾಲ, ಫೆ.೧೭- ಅನುಮತಿಯಿಲ್ಲದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಳ್ಳಾಲದಲ್ಲಿ ಫೆ.೧೭ ರಂದು ಹಮ್ಮಿಕೊಂಡಿರುವ ಕಾರ್ಯಕ್ರಮದ ಪ್ರಚಾರಕ್ಕಾಗಿ ಉಳ್ಳಾಲ, ತೊಕ್ಕೊಟ್ಟು, ಕಲ್ಲಾಪುವಿನಲ್ಲಿ ಹಾಕಿದ್ದ  ಸ್ವಾಗತ ಕಮಾನುಗಳು, ಬ್ಯಾನರ್, ಧ್ವಜಗಳನ್ನು ಪೊಲೀಸರು ತೆರವುಗೊಳಿಸಿ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವರ್ಷಾಚರಣೆ ಪ್ರಯುಕ್ತ ಉಳ್ಳಾಲದಲ್ಲಿ ಯುನಿಟಿ ಮಾರ್ಚ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅದಕ್ಕಾಗಿ ಕಳೆದ ಬುಧವಾರ ತಡರಾತ್ರಿ ಆಯೋಜಕರು ಉಳ್ಳಾಲ, ಕಲ್ಲಾಪು, ತೊಕ್ಕೊಟ್ಟು, ಚೆಂಬುಗುಡ್ಡೆ ಭಾಗದಲ್ಲಿ ಸ್ವಾಗತ ಕಮಾನು, ಬ್ಯಾನರ್ ಹಾಗೂ ಧ್ವಜಗಳನ್ನು ಪ್ರಚಾರಕ್ಕೆಂದು ಅಳವಡಿಸಿದ್ದರು. ಆದರೆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಯಾವುದೇ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಕಮೀಷನರ್ ಅವರ ಆದೇಶದಂತೆ ಎಸಿಪಿ ಶರತಿ ನೇತೃತ್ವದಲ್ಲಿ ಉಳ್ಳಾಲ ಪೊಲೀಸರು ಎಲ್ಲವನ್ನು ತೆರವುಗೊಳಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಈ ಕುರಿತು ಆಯೋಜಕರ ವಿರುದ್ಧ ಪ್ರಕರಣವೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ.

ಫೆ.೨೫ರವರೆಗೆ ಉಳ್ಳಾಲದಲ್ಲಿ ನಿಷೇಧಾಜ್ಞೆ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಹತ್ತನೇ ವರ್ಷದ ಪ್ರಯುಕ್ತ ಇಂದು ಆಯೋಜಿಸಿರುವ ಯುನಿಟಿ ಮಾರ್ಚ್ ಹಿನ್ನೆಲೆಯಲ್ಲಿ ನಿನ್ನೆ ಸಂಜೆಯಿಂದ ಫೆ.೨೫ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಆದೇಶ ನೀಡಿದ್ದಾರೆ.

ಶಾಂತಿ, ಸುವ್ಯವಸ್ಥೆಗೆ ಧಕ್ಕೆಯಾಗಬಾರದು ಎನ್ನುವ ಉದ್ದೇಶದಿಂದ ಈ ಅವಧಿಯಲ್ಲಿ ಬಹಿರಂಗ ಸಭೆ ಅಥವಾ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ಅವರು ತಿಳಿಸಿದ್ದಾರೆ. ನಿಷೇಧಾಜ್ಞೆ ಫೆ.೨೫ರ ಮಧ್ಯಾಹ್ನ ೧೨ ಗಂಟೆಯವರೆಗೆ ಇರಲಿದೆ. ಮಂಗಳೂರು ನಗರದಲ್ಲೂ ಸೆ.೧೪೪ರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದ್ದು ಫೆ.೧೯ರ ಮಧ್ಯರಾತ್ರಿಯವರೆಗೆ ಜಾರಿಯಲ್ಲಿರಲಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Leave a Comment