ಪಿಎಂಸಿಯಿಂದ ಹಣ ಪಡೆಯಲಾಗದೆ ವೃದ್ಧನಿಗೆ ಹೃದಯಾಘಾತ

ನವದೆಹಲಿ, ಅ. ೧೯- ಹೃದಯ ಸಂಬಂಧಿ ಚಿಕಿತ್ಸೆಗೆ ಬ್ಯಾಂಕ್‌ನಿಂದ ಹಣ ಪಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ 80 ವರ್ಷದ ಠೇವಣಿದಾರ ಮೃತಪಟ್ಟಿರುವ ಧಾರುಣ ಘಟನೆ ಸಂಭವಿಸಿದೆ.
ಇದು ಪಂಜಾಬ್ ಮತ್ತು ಮಹಾರಾಷ್ಟ್ರ ಕೋ – ಆಪರೇಟಿವ್ ಬ್ಯಾಂಕ್‌ನಲ್ಲಿ ನಡೆದಿರುವ ಹಗರಣಕ್ಕೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಮೃತ ವ್ಯಕ್ತಿಯನ್ನು ಮುಂಬೈನ ಮುಳುಂದ್ ಕಾಲೋನಿಯ ಮುರುಳೀಧರ್ ಧಾರಾ ಎಂದು ಗುರುತಿಸಲಾಗಿದೆ. ಈತ ಪಿಎಂಸಿ ಬ್ಯಾಂಕಿನ ಠೇವಣಿದಾರನಾಗಿದ್ದು, ದೀರ್ಘಕಾಲದಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಬೈಪಾಸ್ ಸರ್ಜರಿ ಚಿಕಿತ್ಸೆಗೆ ಒಳಗಾಗಬೇಕಾಗಿತ್ತು.
ಪುತ್ರ ಪ್ರೇಮ್, ಸುದ್ದಿಗಾರರೊಂದಿಗೆ ಮಾತನಾಡಿ, ಸುದೀರ್ಘ ಕಾಲದಿಂದ ನನ್ನ ತಂದೆ ಕಾಯಿಲೆಯಿಂದ ಬಳಲುತ್ತಿದ್ದರು. ಬೈಪಾಸ್ ಸರ್ಜರಿಗೆ ಒಳಪಡುವಂತೆ ವೈದ್ಯರು ಸಲಹೆ ನೀಡಿದ್ದರು. ಆದರೆ ತಮ್ಮ ತಂದೆ ಖಾತೆ ಹೊಂದಿದ್ದ ಪಿಎಂಸಿ ಬ್ಯಾಂಕ್‌ನಿಂದ ಸಕಾಲದಲ್ಲಿ ಹಣ ಪಡೆಯಲು ಸಾಧ್ಯವಾಗದ ಕಾರಣ ನಮ್ಮ ತಂದೆ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಈ ರೀತಿ ಪಿಎಂಸಿ ಬ್ಯಾಂಕ್‌ನಿಂದ ಸಕಾಲಕ್ಕೆ ಹಣ ದೊರೆಯದ ಕಾರಣ, ಇದುವರೆಗೂ ಮೂರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಸೋಮವಾರ ಮುಂಬೈ ನಿವಾಸಿ ಸಂಜಯ್ ಗುಲಾಟಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ವ್ಯಕ್ತಿಯೂ ಕೂಡ ಪಿಎಂಸಿ ಬ್ಯಾಂಕ್‌ನಿಂದ ಹಣ ಪಡೆಯಲು ಸಾಧ್ಯವಾಗಲಿಲ್ಲ. ಗುಲಾಟಿ, ಪಿಎಂಸಿ ಬ್ಯಾಂಕ್‌ನಲ್ಲಿ ನಾಲ್ಕು ಖಾತೆಗಳನ್ನು ಹೊಂದಿದ್ದು, 80 ಲಕ್ಷ ರೂ. ಠೇವಣಿ ಹಣ ಇಟ್ಟಿದ್ದರು. ಆದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬ್ಯಾಂಕ್‌ನಲ್ಲಿ ಹಣವಿದ್ದರೂ ಸಕಾಲದಲ್ಲಿ ಹಣ ಪಡೆಯಲು ಸಾಧ್ಯವಾಗದ ಕಾರಣ, ಈ ಹಣ ಠೇವಣಿ ಇಟ್ಟಿದ್ದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಠೇವಣಿದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ಬ್ಯಾಂಕ್‌ನಿಂದ ಮತ್ತೋರ್ವ ಠೇವಣಿದಾರರಾದ ಪಟೋಮಲ್ ಪಂಜಾಬಿ, ಹೃದಯಾಘಾತದಿಂದ ಮಂಗಳವಾರ ಅಸುನೀಗಿದ್ದರು. ಇದೂ ಕೂಡ ಸಕಾಲದಲ್ಲಿ ಹಣ ಪಡೆಯದ ಕಾರಣ, ಈ ದುರಂತ ಸಂಭವಿಸಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, ಪಿಎಂಸಿ ಬ್ಯಾಂಕ್‌ಗೆ ಬ್ಯಾಂಕಿಂಗ್ ಪ್ರಾಧಿಕಾರ ಕಾಯ್ದೆಯಡಿ ನಿರ್ಬಂಧ ವಿಧಿಸಿತ್ತು. ಆರು ತಿಂಗಳ ಕಾಲ ಯಾವುದೇ ಸಾಲ ಮತ್ತು ಮುಂಗಡ ಹಣವನ್ನು ನೀಡದಂತೆ, ಆರ್‌ಬಿಐ ನಿರ್ಬಂಧ ವಿಧಿಸಿತ್ತು.
ಆರಂಭದಲ್ಲಿ ಆರ್‌ಬಿಐ ಒಂದು ಸಾವಿರ ರೂ. ಹಣ ಪಡೆಯಲು ಅವಕಾಶ ಕಲ್ಪಿಸಿತ್ತು. ಆ ನಂತರ ಈ ಮೊತ್ತವನ್ನು 40 ಸಾವಿರ ರೂ. ಗಳಿಗೆ ಹೆಚ್ಚಿಸಿತ್ತು. ಪಿಎಂಸಿ ಬ್ಯಾಂಕ್‌ನಲ್ಲಿ 4 ಸಾವಿರದ 500 ಕೋಟಿ ರೂ. ಹಗರಣ ನಡೆದಿದ್ದು, ಹಣ ಪಡೆಯಲು ಸಾಧ್ಯವಾಗದ ಕಾರಣ ಠೇವಣಿದಾರರು ಸರಣಿ ಪ್ರತಿಭಟನೆಗಳನ್ನು ನಡೆಸಿದ್ದರು.
ಇದರ ಜೊತೆಗೆ ಪೊಲೀಸರಿಗೂ ದೂರುನೀಡಿ, ಬ್ಯಾಂಕ್ ವಿರುದ್ಧ ನ್ಯಾಯಾಲಯಗಳಲ್ಲೂ ಅರ್ಜಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹಣ ಪಡೆಯಲು ಠೇವಣಿದಾರರಿಗೆ ಸಾಧ್ಯವಾಗದೆ, ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿ.

Leave a Comment