ಪಾವನ ನೆಲೆಯ ಪ.ನಾ.ಹಳ್ಳಿ ಶ್ರೀ ಮಠ

ಸಿರಾ ನಗರದಿಂದ 14 ಕಿ.ಮೀ ಕ್ರಮಿಸಿದರೆ ಪಟ್ಟನಾಯಕನಹಳ್ಳಿ ಸಿಗುತ್ತದೆ. ಸುಮಾರು ಸಾವಿರ ಮನೆಗಳನ್ನು ಹೊಂದಿರುವ ಪಟ್ಟನಾಯಕನಹಳ್ಳಿ ತಾಲ್ಲೂಕಿನ ಪ್ರಮುಖ ವ್ಯಾಪಾರ ಹಾಗೂ ವಿದ್ಯಾಕೇಂದ್ರ. ಸರ್ಕಾರಿ ಪದವಿಪೂರ್ವ ಕಾಲೇಜು, ಸರ್ಕಾರಿ ಖಾಸಗಿ ಪ್ರೌಢಶಾಲೆಗಳು ಇಲ್ಲಿವೆ. ಕಂಬಳಿ ನೇಕಾರರ ಸಹಕಾರ ಸಂಘ, ಕೃಷಿ ಸಹಕಾರ ಸಂಘ ಮೊದಲಾದ ಸಹಕಾರ ಸಂಘಗಳೂ, ವಾಣಿಜ್ಯೋದ್ಯಮಗಳೂ ಇಲ್ಲಿ ಸಾಕಷ್ಟು ಪ್ರಮಾಣದಲ್ಲಿವೆ.

ಬೀರದೇವರ ಗುಡಿ, ಮೈಲಾರಲಿಂಗೇಶ್ವರ ದೇವಾಲಯ, ಸೋಮೇಶ್ವರ ದೇವಾಲಯ, ಶನಿದೇವರ ದೇವಾಲಯ ಮೊದಲಾದ ದೇವಾಲಯಗಳು, ಮಸೀದಿಯೂ ಇದೆ. ಹರಿಜನ, ಗಿರಿಜನ, ಗೊಲ್ಲರು, ಕುರುಬರು, ಕುಂಚಿಟಿಗರುಗಳು ಸಮಾನವಾಗಿ ಕೂಡಿ ಬದುಕುತ್ತಾರೆ. ಸಾಂಸ್ಕೃತಿಕ, ಧಾರ್ಮಿಕ ವಿಚಾರಗಳಲ್ಲಿ ಪರಸ್ಪರ ಸಹಕಾರ, ಸಂಯಮತೆಯನ್ನು ಕಾಯ್ದುಕೊಂಡು ಬರುತ್ತಿದ್ದಾರೆ. ಪ.ನಾ.ಹಳ್ಳಿ ಧಾರ್ಮಿಕವಾಗಿ ಭವ್ಯ ಪರಂಪರೆಯನ್ನು ಹೊಂದಿದೆ. ಶ್ರೀ ಗುರುಗುಂಡ ಬ್ರಹ್ಮೇಶ್ವರ ಮಠ ತುಮಕೂರು ಜಿಲ್ಲೆಯ ಅತ್ಯಂತ ಪ್ರಸಿದ್ಧವಾದ ಶ್ರೀ ಕ್ಷೇತ್ರವಾಗಿದೆ.

ಶ್ರೀ ನಂಜಾವಧೂತ ಪೀಠಾಧಿಕಾರತ್ವದ ಭವ್ಯ ಪರಂಪರೆಯೂ ಇದೆ. ಪ್ರತಿವರ್ಷ ಜನವರಿ ತಿಂಗಳಲ್ಲಿ ದನಗಳ ಜಾತ್ರೆ ಸರಾಸರಿ ಹದಿನೈದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ. ಜಾತ್ರೆಗೆ ಹಿರಿಯೂರು, ಮಡಕಸಿರಾ, ಹಿಂದೂಪುರ, ಮಧುಗಿರಿ, ಕೊರಟಗೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ, ಚಳ್ಳಕೆರೆ ಈ ಭಾಗಗಳ ದನಗಳು ಬಂದು ಸೇರುತ್ತವೆ. ಮಾರುವ, ಕೊಳ್ಳುವ ಅಪಾರ ಜನ ಪಟ್ಟನಾಯಕನಹಳ್ಳಿಯಲ್ಲಿ ಸೇರುತ್ತಾರೆ. ಐವತ್ತನಾಲ್ಕು ಎಕರೆ ವಿಶಾಲ ಕಾಂಪೌಂಡ್, ಕಾಂಪೌಂಡಿನ ಸುತ್ತ ಬೆಳೆದು ನಿಂತ ಹುಣಸೆ, ಹೊಂಗೆ, ಬೇವಿನ ಮರಗಳ ಸಾಲು ಶ್ರೀಮಠಕ್ಕೆ ಹೊಂದಿಕೊಂಡಂತಿರುವ ಕೆರೆ, ನಂಜಾವಧೂತ ಮಠದ ಜಾತ್ರೆಗೆ ಪ್ರಾಕೃತಿಕ ಕೊಡುಗೆಗಳು, ಉತ್ತಮ ನೆರಳು ನೀರಿನ ಸೌಕರ್ಯವಿರುವುದರಿಂದ ದನಗಳ ವಿನಿಮಯಕ್ಕೆ ಹೇಳಿ ಮಾಡಿಸಿದಂತಹ ವಾತಾವರಣವಿದೆ. ಜಾತ್ರೆಗೆ ಬಂದಂತಹ ಭಕ್ತಾಧಿಗಳು ಉತ್ತಮ ಊಟದ ವ್ಯವಸ್ಥೆಯನ್ನು ಶ್ರೀಮಠ ಪ್ರಾರಂಭದಿಂದಲೂ ಮಾಡುತ್ತಾ ಬಂದಿದೆ.

Leave a Comment