ಪಾಲಿಕೆ ಚುನಾವಣೆ: 275 ನಾಮಪತ್ರ ಸಲ್ಲಿಕೆ

ತುಮಕೂರು, ಆ. ೨೧- ತುಮಕೂರು ಮಹಾನಗರ ಪಾಲಿಕೆಯ 35 ವಾರ್ಡ್‌ಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ನಿನ್ನೆ ಒಂದೇ ದಿನ 235 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಒಟ್ಟು 275 ಮಂದಿ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸಲು ನಿನ್ನೆ ಕೊನೆಯ ದಿನವಾದ್ದರಿಂದ ಭಾರೀ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಮಹಾನಗರ ಪಾಲಿಕೆ ಕಚೇರಿಗೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಅಭ್ಯರ್ಥಿಗಳ ಜತೆ ಭಾರೀ ಸಂಖ್ಯೆಯ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಆಗಮಿಸಿದ್ದರಿಂದ ದೊಡ್ಡ ಸಂಖ್ಯೆಯಲ್ಲಿ ಜನ ಸಾಗರವೇ ಸೇರಿತ್ತು. ಪ್ರತಿ ಅಭ್ಯರ್ಥಿಯು ನಾಮಪತ್ರ ಸಲ್ಲಿಕೆಗೆ ತೆರಳಿದಾಗ ಅವರ ಬೆಂಬಲಿಗರು ಜೈಕಾರ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಜತೆಗೆ ಸಿಪಿಐ, ಸಿಪಿಎಂ ಹಾಗೂ ಬಹುಜನ ಸಮಾಜವಾದಿ ಪಕ್ಷದಿಂದಲೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಜತೆಗೆ ಪಕ್ಷೇತರರು, ರಾಜಕೀಯ ಪಕ್ಷಗಳ ಬಂಡಾಯಗಾರರು ಸಹ ಸಾಕಷ್ಟು ಸಂಖ್ಯೆಯಲ್ಲಿ ಉಮೇದುವಾರಿಕೆ ಸಲ್ಲಿಸಿದರು.

ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ನಿನ್ನೆ ಇಡೀ ದಿನ ಜನಸಾಗರ ಸೇರಿದ್ದರಿಂದ ಭಾರಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ನಾಮಪತ್ರ ಸಲ್ಲಿಕೆಗೂ ಮುನ್ನ ಬಹುತೇಕ ಅಭ್ಯರ್ಥಿಗಳು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ನಂತರ ಪಾಲಿಕೆ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು. ಇನ್ನು ಕೆಲವರು ನಗರದ ಹೊರಪೇಟೆಯಲ್ಲಿರುವ ಕರಿಬಸವೇಶ್ವರ ಮಠಕ್ಕೆ ತೆರಳಿ ಅಲ್ಲಿನ ಆನೆ ಬಳಿ ಆಶೀರ್ವಾದ ಪಡೆದದ್ದು ಗಮನ ಸೆಳೆಯಿತು.

ಮಹಾನಗರ ಪಾಲಿಕೆ ಚುನಾವಣೆಯ ಮತದಾನಕ್ಕಾಗಿ 271 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತಗಟ್ಟೆಗಳು ವಾರ್ಡ್‌ಗಳ ಪುನರ್ ವಿಂಗಡಣೆಗನುಗುಣವಾಗಿ ಆಯಾ ವಾರ್ಡ್‌ಗಳ ವ್ಯಾಪ್ತಿಯೊಳಗೆ ಬರುವಂತೆ ಕ್ರಮ ವಹಿಸಲಾಗಿದ್ದು, ಇದರಿಂದ ಕೆಲವು ವಾರ್ಡ್‌ಗಳಲ್ಲಿ ಮತದಾರರ ವ್ಯಾಪ್ತಿಯು ಬದಲಾವಣೆಯಾಗಿದೆ. ಈ ಹಿನ್ನಲೆಯಲ್ಲಿ ಮತದಾನ ದಿನದಂದು ಮತಗಟ್ಟೆ ಹಾಗೂ ಮತದಾರರ ಪಟ್ಟಿಯ ಮಾಹಿತಿ ತಿಳಿಯದೆ ಗೊಂದಲಕ್ಕೊಳಗಾಗುವ ಸಾಧ್ಯತೆ ಇರುವುದರಿಂದ ನಗರ ವ್ಯಾಪ್ತಿಯಲ್ಲಿರುವ ಮತದಾರರು ಮುಂಚಿತವಾಗಿಯೇ ಮತಗಟ್ಟೆಯ ಸ್ಥಳ ಹಾಗೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಪಾಲಿಕೆ ಆಯುಕ್ತ ಮಂಜುನಾಥಸ್ವಾಮಿ ತಿಳಿಸಿದ್ದಾರೆ.

ಮತದಾರರು ಖುದ್ದಾಗಿ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿಯನ್ನು ಪರಿಶೀಲಿಸಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಂಡು ಸಂದೇಹವಿದ್ದಲ್ಲಿ ಮತಗಟ್ಟೆಯ ಬಿಎಲ್‍ಓ (ಮತಗಟ್ಟೆ ಮಟ್ಟದ ಅಧಿಕಾರಿ) ಅವರನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ವಾರ್ಡಗಳ ಬಿಲ್ ಕಲೆಕ್ಟರ್ ಅಥವಾ ಕಂದಾಯ ನಿರೀಕ್ಷಕರನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದ್ದಾರೆ.

Leave a Comment