ಪಾಲಿಕೆಯಿಂದ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ

ತುಮಕೂರು, ಜೂ. ೨೦-  ನಗರದ ಸಿರಾಗೇಟ್ ಹೊರವಲಯದ 1ನೇ ವಾರ್ಡ್ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.

ಹೆದ್ದಾರಿಯಿಂದ ಡಾನ್‍ಬಾಸ್ಕೊ ಶಾಲೆ ಕಡೆಗೆ ತಿರುವು ಪಡೆಯುವ ಆರಂಭದಲ್ಲಿ ಖಾಸಗಿ ರೈಸ್ ಮಿಲ್‍ನಿಂದ ರಸ್ತೆ ಜಾಗ ಒತ್ತುವರಿಯಾಗಿತ್ತು. ಈ ಬಗ್ಗೆ ದೂರು ಸಹ ಇತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ಆಶಾ, ಜೂನಿಯರ್ ಇಂಜಿನಿಯರ್ ಮಾರ್ಟಿನಾ ಅವರ ನೇತೃತ್ವದಲ್ಲಿ ಪಾಲಿಕೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

30 ಅಡಿ ಅಗಲದ ರಸ್ತೆ ಜಾಗದಲ್ಲಿ ರೈಸ್ ಮಿಲ್‍ನವರು ಸುಮಾರು 15 ಅಡಿಗಳಷ್ಟು ಒತ್ತುವರಿ ಮಾಡಿಕೊಂಡಿದನ್ನು ಗುರುತಿಸಿ, ಆ ಜಾಗದಲ್ಲಿ ರೈಸ್‌ಮಿಲ್‍ನವರು ನಿರ್ಮಿಸಿದ್ದ ಸುಮಾರು 15 ಅಡಿ ಎತ್ತರ ಮತ್ತು ಸುಮಾರು 400 ಅಡಿ ಉದ್ದದ ನಿರ್ಮಿಸಿದ್ದ ಕಟ್ಟಡವನ್ನು ತೆರವುಗೊಳಿಸಲಾಯಿತು.

ಈ ರಸ್ತೆಯು ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಈ ಮಾರ್ಗವು ಪಿ.ಎನ್. ಪಾಳ್ಯದಲ್ಲಿರುವ ಪಾಲಿಕೆಗೆ ಸೇರಿದ ಹೇಮಾವತಿ ನೀರು ಶುದ್ಧೀಕರಣ ಘಟಕಕ್ಕೆ ಸಂಪರ್ಕ ಕಲ್ಪಿಸುತ್ತದೆ. ಡಾನ್‍ಬಾಸ್ಕೊ ಶಾಲೆಗೆ ಸಹ ಇದೇ ದಾರಿಯಲ್ಲಿ ತೆರಳಬೇಕು. ಇನ್ನು ಬುಗುಡನಹಳ್ಳಿ, ಕುಪ್ಪೂರು, ಹೊನ್ನೇನಹಳ್ಳಿ ಮೊದಲಾದ ಸುಮಾರು 10 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. 14ನೇ ಹಣಕಾಸು ಯೋಜನೆಯಲ್ಲಿ 20 ಲಕ್ಷ ರೂ.ಗಳನ್ನು ಮೀಸಲಿರಿಸಿದ್ದು, ಈ ಮೊತ್ತದಲ್ಲಿ 30 ಅಡಿ ಅಗಲದ ಈ ರಸ್ತೆಯ ಡಾಂಬರೀಕರಣ ಕಾಮಗಾರಿ ಸದ್ಯದಲ್ಲೇ ನಡೆಯಲಿದೆ.

ಪ್ರಸ್ತುತ ರಸ್ತೆ ಸಮಸ್ಯೆ ಬಗೆಹರಿದಿರುವುದರಿಂದ ಈ ಮಾರ್ಗವಾಗಿ ಸಿಟಿ ಬಸ್ ಸಂಚಾರ ವ್ಯವಸ್ಥೆಗೂ ಪ್ರಯತ್ನಿಸಲಾಗುತ್ತಿದೆ ಎಂದು ಈ ಭಾಗದ ಪಾಲಿಕೆ ಸದಸ್ಯೆ ನಳಿನ ಇಂದ್ರಕುಮಾರ್ ತಿಳಿಸಿದ್ದಾರೆ.

Leave a Comment