ಪಾಲಿಕೆಯಲ್ಲೂ ಕುಟುಂಬ ರಾಜಕೀಯ

ಮೈಸೂರು, ಆ. 28. ಕೇವಲ ಭಾಷಣಗಳಲ್ಲಿ ಮಾತ್ರ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಮಾತನಾಡುವ ರಾಜಕೀಯ ನಾಯಕರು ಪ್ರತಿ ಚುನಾವಣೆಯಲ್ಲಿಯೂ ಕುಟುಂಬ ರಾಜಕಾರಣಕ್ಕೆ ಆದ್ಯತೆ ನೀಡುವ ಮೂಲಕ ಅಧಿಕಾರ ಕುಟುಂಬ ಕೇಂದ್ರೀಕರಣಕ್ಕೆ ಒತ್ತು ನೀಡುವ ಸಂಗತಿ ಭಾರತೀಯ ರಾಜಕಾರಣದಲ್ಲಿ ಹಾಸುಹೊಕ್ಕಾಗಿದೆ. ಈ ಅನಿಷ್ಟ ಸಂಪ್ರದಾಯ ಈ ಬಾರಿಯ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಮುಂದುವರಿದಿದೆ. ಕುಟುಂಬ ರಾಜಕಾರಣಕ್ಕೆ ಹೆಚ್ಚಿನ ಪ್ರಾಧ್ಯಾನತೆ ನೀಡಲಾಗಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ತಮ್ಮ ಮುಖಂಡರ ಪತ್ನಿಯರಿಗೆ, ಮಕ್ಕಳಿಗೆ, ಅಳಿಯ, ಸಹೋದರ ಸೇರಿ ಕುಟುಂಬದ ಸದಸ್ಯರಿಗೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ಸು ಕಂಡಿದ್ದಾರೆ.

ಕಣದಲ್ಲಿ ಪತ್ನಿಯರೇ ಹೆಚ್ಚು

ಕ್ಷೇತ್ರ ಪುನರ್ ವಿಂಗಡಣೆ, ಮಹಿಳಾ ಮೀಸಲಾತಿ ಕಾರಣಕ್ಕೆ ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗದ ಮೂರು ಪಕ್ಷಗಳ ಮುಖಂಡರು ತಮ್ಮ ಪತ್ನಿ, ಹತ್ತಿರದ ಸಂಬಂಧಿಕರಿಗೆ ಟಿಕೆಟ್ ಪಡೆದುಕೊಂಡು ಕಣಕ್ಕಿಳಿಸಿದ್ದಾರೆ. ಮಹಿಳಾ ಮೀಸಲು ವಾರ್ಡ್‍ಗಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ನೆಪಮಾತ್ರವಾಗಿದ್ದು, ತಾವೇ ಅಭ್ಯರ್ಥಿ ಎನ್ನುವಂತೆ ಪತಿಯರು ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮೂರು ಪಕ್ಷಗಳಲ್ಲೂ ಸಾಮಾನ್ಯವಾಗಿದೆ.
ಹಲವು ವರ್ಷದಿಂದ ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗುತ್ತಲೇ ಬಂದು ಹಿರಿಯ ಸದಸ್ಯ ಎನ್ನುವ ಖ್ಯಾತಿ ಪಡೆದಿರುವ ಮಾಜಿ ಮೇಯರ್ ಎಚ್.ಎನ್. ಶ್ರೀಕಂಠಯ್ಯ ಅವರು ಈ ಬಾರಿ ಮೀಸಲು ಕೈತಪ್ಪಿದ್ದರಿಂದ ತಮ್ಮ ಪತ್ನಿ ಹಾಗೂ ಮಾಜಿ ಉಪಮೇಯರ್ ಶಾಂತಕುಮಾರಿ ಅವರನ್ನು ವಾರ್ಡ್ 32ರಲ್ಲಿ ಕಣಕ್ಕಿಳಿಸಿದ್ದಾರೆ. ಅದೇ ರೀತಿ ಶ್ರೀರಾಂಪುರ ಜಿಲ್ಲಾ ಪಂಚಾಯಿತಿ ಸದಸ್ಯ ಮಾದೇಗೌಡ ತಮ್ಮ ಪತ್ನಿ ರುಕ್ಮಿಣಿ ಅವರನ್ನು ಜೆಡಿಎಸ್‍ನಿಂದ 36ನೇ ವಾರ್ಡ್‍ನಲ್ಲಿ ಕಣಕ್ಕಿಳಿಸಿದ್ದಾರೆ. ಪತಿ ಗ್ರಾಮಾಂತರ ಪ್ರದೇಶದ ಪ್ರತಿನಿಧಿಯಾದರೆ, ಪತ್ನಿ ಆಯ್ಕೆಯಾದರೆ ನಗರ ಪ್ರದೇಶದ ಪ್ರತಿನಿಧಿಯಾಗಲಿದ್ದಾರೆ.
ಕಳೆದ ಬಾರಿ ಗೋಕುಲಂ ವಾರ್ಡಿನಿಂದ ಆಯ್ಕೆಯಾಗಿದ್ದ ಸಿ. ಮಹದೇಶ್ ಅವರು ಸದಸ್ಯತ್ವ ಕಳೆದುಕೊಂಡಿದ್ದರು. ಆದರೆ, ಪಕ್ಕದ 19ರಲ್ಲಿ ಪತ್ನಿ ಭಾಗ್ಯ ಅವರನ್ನು ಜೆಡಿಎಸ್‍ನಿಂದ ಕಣಕ್ಕಿಳಿಸಿರುವುದು ವಿಶೇಷವಾಗಿದೆ. ಕಳೆದ ಚುನಾವಣೆಯಲ್ಲಿ ಮೀಸಲಾಗಿದ್ದರಿಂದ ಪತ್ನಿ ಕಣಕ್ಕಿಳಿಸಿದ್ದ ಮಾಜಿ ಮೇಯರ್ ಆರಿಫ್ ಹುಸೇನ್ ಈ ಬಾರಿ ವಾರ್ಡ್ 16ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ತಾವೇ ಕಣಕ್ಕಿಳಿದಿದ್ದಾರೆ.
2013ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡ ನಿವೃತ್ತ ಡಿವೈಎಸ್‍ಪಿ ಚೆಲುವರಾಜು ಅವರ ಪುತ್ರ ಗುರುವಿನಾಯಕ 18ನೇ ವಾರ್ಡ್‍ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಅದೃಷ್ಟ ಪರೀಕ್ಷೆ ಎದುರಿಸುತ್ತಿದ್ದಾರೆ. ಮತ್ತೊಂದು ವಿಶೇಷ ಎಂದರೆ ಕಳೆದ ಬಾರಿ ಕಾಂಗ್ರೆಸ್‍ನಿಂದ ಆಯ್ಕೆಯಾಗಿ ಜೆಡಿಎಸ್ ಸಹಕಾರದಿಂದ ಮೇಯರ್ ಆಗಿದ್ದ ಬಿ. ಭಾಗ್ಯವತಿ ಈಗ ಜೆಡಿಎಸ್‍ನಿಂದ ವಾರ್ಡ್ ನಂಬರ್ 21ರಲ್ಲಿ ಕಣಕ್ಕಿಳಿದರೆ, ಉಪಮೇಯರ್ ಇಂದಿರಾ ಮಹೇಶ್ ವಾರ್ಡ್ 30ರಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದರಿಂದ ಹಾಲಿ ಮೇಯರ್-ಉಪಮೇಯರ್ ಒಂದೇ ಪಕ್ಷದಿಂದ ಮರು ಆಯ್ಕೆ ಬಯಸಿದ್ದಾರೆ.
ಕುಟುಂಬ ರಾಜಕಾರಣ
ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಸಹೋದರ ಎಸ್. ಸಂದೇಶ್‍ಸ್ವಾಮಿ ಮೂರು ಅವಧಿಯಿಂದ ಪಾಲಿಕೆ ಸದಸ್ಯರಾಗಿ ಎರಡು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲುಕಂಡಿದ್ದರು. ಈ ಬಾರಿ ತಮ್ಮ ಪುತ್ರ ಎಸ್. ಸಾತ್ವಿಕ್ ಅವರನ್ನು ನಂಬರ್ 35ನೇ ಸಾತಗಳ್ಳಿ ವಾರ್ಡ್‍ನಿಂದ ಕಣಕ್ಕಿಳಿಸಿ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗಿಳಿಸಿದ್ದಾರೆ.
ಕೇಂದ್ರದ ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಅವರ ಸಹೋದರ ವಿ. ರಾಮಸ್ವಾಮಿ ಪುತ್ರ ಆರ್. ಭರತ್ 7ನೇ ವಾರ್ಡ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಈಗಾಗಲೇ ಪ್ರಸಾದ್ ಅವರ ಅಳಿಯ ಹರ್ಷವರ್ಧನ್ ನಂಜನಗೂಡು ಕ್ಷೇತ್ರದ ಶಾಸಕರಾಗಿದ್ದಾರೆ. ಇನ್ನು ನರಸಿಂಹರಾಜ ಕ್ಷೇತ್ರದಲ್ಲಿ ಎರಡು ಬಾರಿ ಸ್ಪರ್ಧೆ ಮಾಡಿದರೂ ಸೋಲು ಕಂಡ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಪಿ. ಮಂಜುನಾಥ್ ಈ ಬಾರಿ 58ನೇ ವಾರ್ಡ್‍ನಿಂದ ಅಳಿಯ ಆರ್.ಕೆ. ಶರತ್ ಕುಮಾರ್ ಅವರನ್ನು ಕಣಕ್ಕಿಳಿಸಿದ್ದಾರೆ.

Leave a Comment