ಪಾರ್ಕಿನ್‌ಸನ್ಸ್ ಡಿಬಿಎಸ್ ರಾಮಬಾಣ

೧೮ನೇ ಶತಮಾನದ ಆರಂಭದಲ್ಲಿ ಪತ್ತೆಯಾದ ಪಾರ್ಕಿನ್ ಸನ್ಸ್ ರೋಗವು ಅಂದಿನಿಂದ ಇಂದಿನವರೆಗೂ ಸಂಶೋಧಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಲೇ ಬಂದಿದೆ. ಈ ರೋಗವು ವ್ಯಕ್ತಿಯ ಮೆದುಳು ಮತ್ತು ನರವ್ಯವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಕೆಲವು ವ್ಯಕ್ತಿಗಳು ಮಾತ್ರ ನಿರ್ದಿಷ್ಟ ರೋಗ ಲಕ್ಷಣ ಹೊಂದಿದ್ದರೆ, ಇನ್ನು ಕೆಲವರು ಹೊಂದಿರುವುದಿಲ್ಲ ಯಾಕೆ, ಇದಕ್ಕೆ ಯಾವ ರೀತಿಯ ಚಿಕಿತ್ಸೆ ಅಗತ್ಯ ಮತ್ತು ರೋಗಿಯ ಜೀವನ ಗುಣಮಟ್ಟವನ್ನು ಸುಧಾರಿಸಲು ಯಾವ ಕ್ರಮ ಕೈಗೊಳ್ಳಬಹುದು ಇತ್ಯಾದಿಗಳನ್ನು ಅರ್ಥಮಾಡಿಕೊಳ್ಳಲು ಸಂಶೋಧಕರು ಪ್ರಯತ್ನಿಸುತ್ತಲೇ ಬಂದಿದ್ದಾರೆ.

ಸಾರ್ವಜನಿಕರಲ್ಲಿ,  ವೈದ್ಯಕೀಯ  ಸಮೂಹದಲ್ಲಿ ಪಾರ್ಕಿನ್‌ಸನ್ಸ್ ರೋಗ ಕುರಿತು ಜಾಗೃತಿ ಮೂಡಿಸುವ  ಅಗತ್ಯವಿದೆ. ಪಾರ್ಕಿನ್‌ಸನ್ಸ್ ರೋಗಕ್ಕೆ ಪರಿಣಾಮಕಾರಿ ಮೆಡಿಕಲ್ ಮತ್ತು ಸರ್ಜಿಕಲ್ ಚಿಕಿತ್ಸೆ ಲಭ್ಯ ವಾಗುವಂತೆಯೂ ನೋಡಿಕೊಳ್ಳಬೇಕಿದೆ. ಇವುಗಳು ಸಾಕಾರಗೊಂಡರೆ, ಪಾರ್ಕಿನ್‌ಸನ್ಸ್ ರೋಗಿಗಳ ಜೀವನಮಟ್ಟ ಸುಧಾರಣೆಗೆ ದಾರಿ ಮಾಡಿಕೊಟ್ಟಂತೆ.

ಡಾ. ಗುರುಪ್ರಸಾದ್ ಹೊಸೂರ್ಕರ್

ನರರೋಗ ತಜ್ಞರು

parkinsons_sh

ಒಂದು ಕಾಲದಲ್ಲಿ ಸ್ವತಂತ್ರವಾಗಿ, ಯಶಸ್ವಿ ಜೀವನ ಸಾಗಿಸುತ್ತಿದ್ದಂಥ ವ್ಯಕ್ತಿಗಳು ಏಕಾಏಕಿ ಆರಾಮವಾಗಿ ನಡೆದಾಗಲು ಆಗದಂಥ ಪರಿಸ್ಥಿತಿ ಎದುರಿಸುತ್ತಾರೆ. ಚಲನೆಯಲ್ಲಿ ನಿಧಾನಗತಿ, ಶರೀರದಲ್ಲಿ ಬಿಗಿತ, ಕೈಗಳ ಚಲನೆಯಲ್ಲಿನ ನಿಧಾನಗತಿಯಿಂದಾಗಿ ತಿನ್ನುವುದು, ಬರೆಯುವುದು, ಶೇವಿಂಗ್ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಆಗದೇ ಇರುವುದು ಅಥವಾ ಹಿಂದಿನಂತೆ ಸುಲಭವಾಗಿ ಮಾತನಾಡಲು ಆಗದೇ ಇರುವುದು ಮುಂತಾದ ಸಮಸ್ಯೆಗಳು ಜತೆಯಾಗುತ್ತವೆ.

ನಿಜ, ಪಾರ್ಕಿನ್‌ಸನ್ಸ್ ರೋಗವೇ ಹಾಗೆ. ಮಾನವನ ದೇಹದ ಅಂಗಗಳ ಚಲನೆಗೆ ಸಂಬಂಧಿಸಿದ ನರಕೋಶಗಳು ಸತ್ತಾಗ ಅಥವಾ ನ್ಯೂನತೆಗೊಳಗಾದಾಗ ಈ ರೋಗ ಕಾಣಿಸಿಕೊಳ್ಳುತ್ತದೆ. ಇದು, ಮೆದುಳಿನ ಪ್ರಮುಖ ಸಂದೇಶಗಳನ್ನು ಒಂದು ನರದಿಂದ ಮತ್ತೊಂದು ನರಕ್ಕೆ ರವಾನಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ, ಮೋಟಾರ್ (ಸ್ನಾಯು ಚಲನೆಗೆ ಅಥವಾ ನರಗಳ ಚಲನೆಗೆ ಸಂಬಂಧಿಸಿದ) ಅಥವಾ ನಾನ್-ಮೋಟಾರ್ ರೋಗ ಲಕ್ಷಣ ಕಾಣಿಸಿಕೊಳ್ಳತೊಡಗುತ್ತವೆ. ಈ ರೋಗವು ಸಾಮಾನ್ಯವಾಗಿ ೫೦ ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದವರಲ್ಲಿ ಕಂಡುಬರುತ್ತದೆ. ಕೆಲವೊಂದು ಬಾರಿ, ಪಾರ್ಕಿನ್‌ಸನ್ಸ್  ರೋಗವು ಬೇಗನೇ ಕಂಡುಬರಬಹುದು. ಅದಕ್ಕೆ ಆನುವಂಶಿಕ ಕಾರಣಗಳಿರಬಹುದು.

deep1

ಪಾರ್ಕಿನ್‌ಸನ್ಸ್  ರೋಗದಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಕಂಡುಬರುವಂಥ ಮೋಟಾರ್ ರೋಗ ಲಕ್ಷಣಗಳೆಂದರೆ, ಕೈಗಳಲ್ಲಿ ಆಗಾಗ್ಗೆ ಕಂಪನ, ಅಂಗಾಂಗಗಳ ಚಲನೆ ವೇಳೆ ನಿಧಾನಗತಿ, ಅಂಗಾಂಗಗಳ ಬಿಗಿತ, ಮುಂಡದ ಸ್ನಾಯುಗಳಲ್ಲಿ ನೋವು ಇತ್ಯಾದಿ.ಇದು ಸಾಮಾನ್ಯವಾಗಿ ಶರೀರದ ಒಂದು ಭಾಗದಲ್ಲಿ ಆರಂಭವಾಗಿ, ನಂತರ ಮತ್ತೊಂದು ಭಾಗಕ್ಕೆ ವ್ಯಾಪಿಸುತ್ತದೆ. ಕೆಲವು ರೋಗಿಗಳು ನಿಲ್ಲಲು ಸಾಧ್ಯವಾಗದೇ, ಕುಸಿದು ಬೀಳುತ್ತಾರೆ. ಇದಕ್ಕೆ ಆದಷ್ಟು ಬೇಗ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿದರೆ, ಇಂಥ ಬಹುತೇಕ ರೋಗ ಲಕ್ಷಣಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾಧ್ಯವಿದೆ. ಆದರೆ, ರೋಗವು ವೃದ್ಧಿಸುತ್ತಾ ಹೋದಂತೆ, ಚಿಕಿತ್ಸೆಗೆ ಸ್ಪಂದನೆ ಕಡಿಮೆಯಾಗುತ್ತಾ ಸಾಗುತ್ತದೆ. ಅಂಥ ಸಂದರ್ಭದಲ್ಲಿ ಡೋಸೇಜ್ ಹೆಚ್ಚಿಸಬೇಕಾಗುತ್ತದೆ.

ಅಷ್ಟೇ ಅಲ್ಲ, ಚಿಕಿತ್ಸೆಯ ಪರಿಣಾಮವಾಗಿ ಅವರ ಅಂಗಾಂಗಗಳು, ತಲೆ, ಕುತ್ತಿಗೆಯ ಭಾಗಗಳಲ್ಲಿ ಅನಪೇಕ್ಷಿತ ಚಲನೆಗಳೂ ಕಾಣಿಸಿಕೊಳ್ಳಬಹುದು. ಪಾರ್ಕಿನ್ಸನ್ ರೋಗಿಗಳಲ್ಲಿ ಕಾಣಿಸಿಕೊಳ್ಳುವಂಥ ನಾನ್-ಮೋಟಾರ್ ಲಕ್ಷಣಗಳೆಂದರೆ, ಮಲಬದ್ಧತೆ, ಖಿನ್ನತೆ, ಸೈಕೋಸಿಸ್, ನೆನಪಿನ ಶಕ್ತಿ ಕಳೆದುಕೊಳ್ಳುವಿಕೆ, ಮೂತ್ರ ವಿಸರ್ಜನೆಯಲ್ಲಿ ತೊಂದರೆ ಇತ್ಯಾದಿ. ಈ ಪೈಕಿ ಕೆಲವು ರೋಗಕ್ಕೆ ಸಂಬಂಧಿಸಿದ್ದಾದರೆ, ಇನ್ನು ಕೆಲವು ಔಷಧಗಳಿಂದಾಗಿಯೇ ಉಂಟಾಗುವಂಥದ್ದು.

ಇತ್ತೀಚಿನ ವರ್ಷಗಳಲ್ಲಿ, ಭಾರತದಲ್ಲಿ ಪಾರ್ಕಿನ್ಸನ್ ರೋಗಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಇದಕ್ಕೆ ಹಲವು ಕಾರಣಗಳಿರಬಹುದು:

  1. ಜೀವಿತಾವಧಿಯಲ್ಲಿನ ಹೆಚ್ಚಳ. ಹಿಂದಿನ ಕಾಲಕ್ಕೆ ಹೋಲಿಸಿದರೆ ಈಗ ಜನರಆಯಸ್ಸು ಹೆಚ್ಚುತ್ತಿದೆ. ೧೯೬೦ರಲ್ಲಿ ಸರಾಸರಿ ಜೀವಿತಾವಧಿಯು ೪೧ ವರ್ಷಗಳಾಗಿದ್ದರೆ, ಈಗ ಅದು ೬೮ ಕ್ಕೇರಿಕೆಯಾಗಿದೆ. ವಯಸ್ಸುಎನ್ನುವುದು ವ್ಯಕ್ತಿಯಲ್ಲಿ ಪಾರ್ಕಿನ್ಸನ್ ರೋಗದ ರಿಸ್ಕ್ ಹೆಚ್ಚಿಸುವುದೂ ಇಲ್ಲಿ ಪ್ರಮುಖ ಕಾರಣ.
  2. ಪಾರ್ಕಿನ್‌ಸನ್ಸ್ ರೋಗದ ಬಗ್ಗೆ ಹೆಚ್ಚುತ್ತಿರುವ ಜನಜಾಗೃತಿ. ಅಂದರೆ, ಬಹುತೇಕ ಹಿರಿಯ ನಾಗರಿಕರು ಆರಂಭಿಕ ಹಂತದಲ್ಲೇ ವೈದ್ಯಕೀಯ ನೆರವು ಬಯಸುತ್ತಿದ್ದಾರೆ. ಜೊತೆಗೆ, ಇಂಥ ವಯೋಸಂಬಂಧಿ ರೋಗಗಳ ಲಕ್ಷಣಗಳ ಕುರಿತು ಕುಟುಂಬದ ಇತರೆ ಸದಸ್ಯರು ಅಲರ್ಟ್ ಆಗಿರುವುದು ಹಾಗೂ ಕೂಡಲೇ ವೈದ್ಯರನ್ನು ಭೇಟಿಯಾಗುವಂತೆ ಉತ್ತೇಜಿಸುವುದು ಕೂಡ ಒಂದು ಕಾರಣ.

ಮೆದುಳಿನಲ್ಲಿರುವ  ಕೆಮಿಕಲ್ ನ್ಯೂರೋಟ್ರಾನ್ಸ್‌ಮಿಟರ್ ಆಗಿರುವಂಥ ಡೊಪಮೈನ್‌ನ ಮಟ್ಟವು ಕುಸಿತಗೊಂಡಾಗ, ಪಾರ್ಕಿನ್ ಸನ್ಸ್ ರೋಗಲಕ್ಷಣ ಪತ್ತೆಯಾಗುತ್ತದೆ ಎಂಬುದನ್ನು ೧೯೫೦ರಲ್ಲಿ ಸಂಶೋಧಕರು ಕಂಡುಕೊಂಡರು.  ಇಷ್ಟೇ ಅಲ್ಲ,ಹೊರಗಿನಿಂದ ನೀಡಲಾದ ಡೊಪಮೈನ್ ರೋಗಿಯಲ್ಲಿ ಗಮನಾರ್ಹ ಸುಧಾರಣೆಯನ್ನು  ಅಂದರೆ, ಕಂಪನದಲ್ಲಿ ಇಳಿಕೆ, ಒಟ್ಟಾರೆ ದೈಹಿಕ ಚಲನೆಯಲ್ಲಿ ಸುಧಾರಣೆ ತರುತ್ತದೆ ಎಂಬುದನ್ನೂ ಅವರು ಅರಿತು ಕೊಂಡರು.

ಡೊಪಮೈನ್ ಮೇಲೆ ಗಮನ ಕೇಂದ್ರೀಕರಿಸಿದ ಫಲವಾಗಿ, ಸಂಶೋಧಕರು ಪಾರ್ಕಿನ್ಸನ್ ರೋಗಕ್ಕೆ ರಾಮಬಾಣವಾಗುವಂಥ ಹಲವು ಔಷಧಗಳನ್ನು ಅಭಿವೃದ್ಧಿಪಡಿಸಿದರು. ಅದರಂತೆ, ಲೆವಡೋಪಾ ಎಂಬ ಔಷಧವನ್ನು ಕಂಡುಹಿಡಿದು ೫೦ ವರ್ಷಗಳೇ ದಾಟಿದರೂ, ಅದು ಈಗಲೂ ಪಾರ್ಕಿನ್ಸನ್ಸ್ ರೋಗಕ್ಕೆ ಪರಿಣಾಮಕಾರಿ ಔಷಧ ಎಂಬ ಖ್ಯಾತಿಯನ್ನು ಉಳಿಸಿಕೊಂಡಿದೆ.

birmingham_retirement_communities

ಈ ಔಷಧವು ಬಹುತೇಕ ಎಲ್ಲ ಮೋಟಾರ್ ಲಕ್ಷಣಗಳನ್ನು ಸುಧಾರಿಸುತ್ತದೆ. ಅದಾದ ಬಳಿಕದ ವರ್ಷಗಳಲ್ಲಿ, ಡೋಪಾಅಗೋನಿಸ್ಟ್ಸ್, ಅಮಾಂಟಡೈನ್, ಸಿಓಎಂಟಿ ಮತ್ತು ಎಂಎಒ ಇನ್‌ಹಿಬಟರ್ಸ್ ಎಂಬಿತ್ಯಾದಿ ಅನೇಕ ಔಷಧಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅವುಗಳೂ ಪರಿಣಾಮಕಾರಿ ಎಂದು ಸಾಬೀತಾಗಿದೆ. ಆಯ್ದ ರೋಗಿಗಳಿಗೆ ಆಂಟಿಕೊಲಿನರ್ಜಿಕ್ಸ್ ನಂಥ ಹಳೆಯ ತಲೆಮಾರಿನ ಔಷಧವನ್ನು ನೀಡಲಾಗುತ್ತದೆ. ಹಿಂದೆಯೇ ಹೇಳಿದಂತೆ, ರೋಗವು ಬೆಳೆಯುತ್ತಾ ಹೋದಂತೆ, ಚಿಕಿತ್ಸೆಗೆ ಸ್ಪಂದಿಸುವ ಅವಧಿ ಮತ್ತು ಪರಿಣಾಮಕಾರಿತ್ವವು ಇಳಿಮುಖವಾಗುತ್ತದೆ.

ಇದಾದ ನಂತರ, ಪಿಡಿ ಚಿಕಿತ್ಸೆಯಲ್ಲಿ ಮತ್ತೊಂದು ಹೆಜ್ಜೆಇಡಲಾಯಿತು. ಅದೆಂದರೆ, ಡೀಪ್ ಬ್ರೈನ್ ಸ್ಟಿಮ್ಯುಲೇಷನ್(ಡಿಬಿಎಸ್) ಎಂಬ ಸುಧಾರಿತ ಶಸ್ತ್ರಚಿಕಿತ್ಸಾ ವಿಧಾನ. ಇದೀಗ ಡಿಬಿಎಸ್‌ಎನ್ನುವುದು ಒಂದು ಅಚ್ಚರಿಯ ಚಿಕಿತ್ಸೆಯಾಗಿ ಮಾರ್ಪಾಟಾಗಿದೆ. ಇದರಿಂದಾಗಿ ಪಾರ್ಕಿನ್ಸನ್‌ರೋಗದ ಪ್ರಮುಖ ಲಕ್ಷಣಗಳಾದ ಕಂಪನ, ಶರೀರ ಬಿಗಿತ, ಸೆಟೆತ, ಚಲನೆಯಲ್ಲಿ ವಿಳಂಬ ಮತ್ತು ನಡೆಯಲು ಅಸಾಧ್ಯವಾಗುವಿಕೆ ಮುಂತಾದ ಸಮಸ್ಯೆಗಳು ಕಡಿಮೆಯಾಗಿವೆ.

ಈ ಶಸ್ತ್ರಚಿಕಿತ್ಸೆಯ ಪ್ರಕ್ರಿಯೆಯಲ್ಲಿ, ಮೊದಲಿಗೆ ಮೆದುಳಿನ ನಿರ್ದಿಷ್ಟ ಪ್ರದೇಶದೊಳಗೆ ತೆಳ್ಳಗಿನ ವೈರ್‌ಅನ್ನು ಇರಿಸಲಾಗುತ್ತದೆ. ನಂತರ ಅದನ್ನು ಚರ್ಮದ ಕೆಳಗಿನ ಪಲ್ಸ್‌ಜನರೇಟರ್ (ಪೇಸ್‌ಮೇಕರ್ ಮಾದರಿಯದ್ದು)ಗೆ  ಸಂಪರ್ಕ ಕಲ್ಪಿಸಲಾಗುತ್ತದೆ. ಈ ಜನರೇಟರ್ ಪಾರ್ಕಿನ್ಸನ್ ರೋಗಕ್ಕೆ ಕಾರಣವಾಗುವಂಥ ಮೆದುಳಿನ ಕೆಲವೊಂದು ಎಲೆಕ್ಟ್ರಿಕಲ್ ಸಿಗ್ನಲ್‌ಗಳನ್ನು ಬದಲಾಯಿಸುತ್ತದೆ. ಲೆವೊಡೋಪಾ ಔಷಧದ ಬಳಕೆಯ ನಂತರವೂ ಮೋಟಾರ್ ಸಮಸ್ಯೆಗಳನ್ನು ಎದುರಿಸುವಂಥ ರೋಗಿಗಳಿಗೆ ಡಿಬಿಎಸ್ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ.

ಮೋಟಾರ್ ಲಕ್ಷಣಗಳನ್ನು ಸುಧಾರಿಸುವುದು, ಮೋಟಾರ್‌ಗೆ ಸಂಬಂಧಿಸಿದ ಚಿಕಿತ್ಸೆಯನ್ನು ಕಡಿಮೆಗೊಳಿಸುವುದರಲ್ಲಿ ಡಿಬಿಎಸ್‌ನ ಪಾತ್ರವೇನು ಎಂಬುದು ದೀರ್ಘಕಾಲಿಕ ಅಧ್ಯಯನಗಳಿಂದ ಸಾಬೀತಾಗಿದೆ. ರೋಗ ಆರಂಭವಾದ ನಂತರ ಆದಷ್ಟು ಬೇಗನೆ ಶಸ್ತ್ರಚಿಕಿತ್ಸೆ ನಡೆಸಬೇಕೇ, ಬೇಡವೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಭಾರತದಾದ್ಯಂತ ವಿವಿಧ ಕೇಂದ್ರಗಳಲ್ಲಿ ಡಿಬಿಎಸ್ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ. ಆದರೆ, ಬಹುತೇಕ ರೋಗಿಗಳಿಗೆ ಇಂಥ ಪರಿಣಾಮಕಾರಿ ಪ್ರಕ್ರಿಯೆಗಳಿರುವುದೇ ಗೊತ್ತಿಲ್ಲ ಹಾಗೂ ಇಂಥ ಕೇಂದ್ರಗಳ ಬಗ್ಗೆಯೂ ಮಾಹಿತಿಇಲ್ಲ.

ನಿರಾಸೆ ಮೂಡಿಸಿದ ಮತ್ತೊಂದು ಸಂಗತಿಯೆಂದರೆ, ವೈದ್ಯಕೀಯ ಪಠ್ಯಕ್ರಮಗಳಲ್ಲಿ ಪಾರ್ಕಿನ್ಸನ್ ರೋಗಕ್ಕೆ  ಹೆಚ್ಚಿನ  ಮಹತ್ವ ದೊರೆ ಯದೇ ಇರುವುದು ಮತ್ತು ಪಿಡಿಗೆ ಚಿಕಿತ್ಸೆ ನೀಡುವ ಕೇಂದ್ರಗಳು ಕೇವಲ ಕೆಲವೇ ಕೆಲವು ಮೆಟ್ರೋಗಳಿಗೆ ಸೀಮಿತವಾಗಿರುವುದು.

Leave a Comment