ಪಾರಂಪರಿಕ ಶಕ್ತಿನಗರ ಹೆದ್ದಾರಿ ಸಂತೆ ಸ್ಥಳಾಂತರ

ರಾಯಚೂರು.ಅ.20- ರಾಷ್ಟ್ರೀಯ ಹೆದ್ದಾರಿ 167ರ ಅಕ್ಕಪಕ್ಕದಲ್ಲಿ ಸಂತೆ ಮಾಡುವುದರಿಂದ ಸಂಚಾರಕ್ಕೆ ಆಗುತ್ತಿರುವ ತೊಂದರೆ ನಿವಾರಿಸುವಲ್ಲಿ ಪೊಲೀಸರು ಅತ್ಯಂತ ಯಶಸ್ವಿ ಕಾರ್ಯಾಚರಣೆ ನಡೆಸಿ, ಪಾರಂಪರಿಕ ಸಂತೆಯನ್ನು ಅಲ್ಲಿಂದ ಸ್ಥಳಾಂತರಿಸಿದ್ದಾರೆ.
ಶಕ್ತಿನಗರದಲ್ಲಿ ಪ್ರತಿ ರವಿವಾರ ಸಂತೆ ನಡೆಸಲಾಗುತ್ತಿತ್ತು. ಸಂತೆಯ ಎಲ್ಲಾ ಚಟುವಟಿಕೆಗಳು ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿ ನಡೆಸಲಾಗುತ್ತಿತ್ತು. ಅತ್ಯಂತ ದಟ್ಟ ಸಂಚಾರದ ಈ ರಸ್ತೆಯಲ್ಲಿ ರವಿವಾರ ಸಂತೆಯಿಂದ ಸಂಚಾರಕ್ಕೆ ಭಾರೀ ತೊಂದರೆಯಾಗಿತ್ತು. ಒಂದೆಡೆ ಸಂಚಾರ ಸಮಸ್ಯೆಯಾದರೇ, ಮತ್ತೊಂದೆಡೆ ಮುಖ್ಯ ರಸ್ತೆಯ ಮೇಲೆ ತರಕಾರಿ ಸೇರಿದಂತೆ ಇನ್ನಿತರ ವಸ್ತುಗಳ ತ್ಯಾಜ್ಯ ಎಸೆಯಲಾಗುತ್ತಿತ್ತು.
ಸಂತೆಯಿಂದಾಗಿ ಅನೇಕ ಸಲ ಅಪಘಾತ ನಡೆದ ಘಟನೆಗಳಿವೆ. ಅ.13 ರಂದು ಕಾಡ್ಲೂರಿನ ಸುಧಾಬಾಯಿ ಎಂಬ ಮಹಿಳೆ ಸಂತೆ ಮಾಡಿಕೊಂಡು ಹೋಗುವಾಗ ಅಪಘಾತಕ್ಕೆ ಗುರಿಯಾಗಿ ಮೃತಪಟ್ಟಿದ್ದಳು. ಈ ಎಲ್ಲಾವನ್ನು ಗಮನದಲ್ಲಿಟ್ಟು ಪೊಲೀಸ್ ಇಲಾಖೆ  ಇಂದು ಸಂತೆಯನ್ನು ಬೇರೆಡೆ ಸ್ಥಳಾಂತರಿಸುವ ಪ್ರಯತ್ನಕ್ಕೆ ಮುಂದಾಗಿದ್ದರು. ವ್ಯಾಪಾರಿಗಳನ್ನು ಒಪ್ಪಿಸಿ ಅತ್ಯಂತ ಯಶಸ್ವಿಯಾಗಿ ಮುಖ್ಯ ರಸ್ತೆ ಮೇಲಿನ ಸಂತೆಯನ್ನು ಸ್ಥಳಾಂತರಿಸಿದ್ದಾರೆ.
ಈ ಸಂತೆಗೆ ದೇವಸೂಗೂರು, ಯದ್ಲಾಪೂರು, ಕಾಡ್ಲೂರು, ಕರೇಕಲ್, ಬೇವಿನಬೆಂಚಿ, ಗುರ್ಜಾಪೂರು, ಗಂಜಳ್ಳಿ, ಕೂಡ್ಲೂರು ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಇದರಿಂದ ವಾಹನ ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗಿತ್ತು. ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರೊಂದಿಗೆ ಚರ್ಚಿಸಿ, ಸಾರ್ವಜನಿಕರ ಅನುಕೂಲಕ್ಕಾಗಿ ಸಂತೆಯನ್ನು ರಾಷ್ಟ್ರೀಯ ಹೆದ್ದಾರಿಯಿಂದ ಪಶ್ಚಿಮ ದಿಕ್ಕಿನಲ್ಲಿರುವ ಬಯಲು ಜಾಗಕ್ಕೆ ಸ್ಥಳಾಂತರಿಸಲಾಯಿತು.
ಈ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಶೀಲವಂತ, ಸಿಪಿಐ ಅಂಬಾರಾಯ, ಪಿಎಸ್ಐ ರಾಮಚಂದ್ರ ಅವರು ಪಾಲ್ಗೊಂಡಿದ್ದರು.

Leave a Comment