ಪಾಪು ಸ್ಮಾರಕ ನಿರ್ಮಿಸಲು ಸಲಹೆ

ಬೆಂಗಳೂರು, ಮಾ. ೧೭- ಇಂದು ನಿಧನರಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಕನ್ನಡದ ಕಟ್ಟಾಳು,ಪತ್ರಕರ್ತ,ಶತಾಯುಷಿ ಡಾ. ಪಾಟೀಲ್ ಪುಟ್ಟಪ್ಪ ಅವರಿಗೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷಧ ನಾಯಕ ಸಿದ್ಧರಾಮಯ್ಯ ಸೇರಿದಂತೆ ಹಲವಾರು ಸಚಿವರು, ಶಾಸಕರು ಮೃತರ ಗುಣಗಾನ ಮಾಡಿ, ಆತ್ಮಕ್ಕೆ ಶಾಂತಿ ಕೋರಿದರು.
ಇದಕ್ಕೂ ಮುನ್ನ ಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ, ಪಾಟೀಲ್ ಪುಟ್ಟಪ್ಪ ಅವರ ನಿಧನ ಕುರಿತ ವಿಷಯವನ್ನು ಸದನಕ್ಕೆ ತಿಳಿಸಿ, ಮೃತರಿಗೆ ಸಂತಾಪ ಸೂಚನಾ ನಿರ್ಣಯ ಮಂಡಿಸಿದರು.
ನಿರ್ಣಯ ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಪಾಟೀಲ್ ಪುಟ್ಟಪ್ಪ ಅವರು ’ಪಾಪು’ ಎಂದೇ ಕನ್ನಡಿಗರಿಗೆ ಚಿರುಪರಿಚತರಾಗಿದ್ದರು. ಕನ್ನಡದ ಅಸ್ಮಿತೆಗಾಗಿ ಅವಿರತ ಹೋರಾಟ ಮಾಡಿದ್ದರು. ಅವರ ಹೋರಾಟ ನಮಗೆ ಆದರ್ಶವಾಗಿದೆ ಎಂದು ತಿಳಿಸಿದರು.
ಮೊನ್ನೆ ತಾನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾಪು ಅವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಲಾಗಿತ್ತು. ಅವರು ನಿನ್ನೆ ನಮ್ಮನ್ನು ಅಗಲಿದ್ದಾರೆ. ಇದು ತಮಗೆ ನೋವು ತಂದಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಲೇಖನಿಯನ್ನೇ ಪ್ರಬಲ ಅಸ್ತ್ರವಾಗಿ ಬಳಸಿಕೊಂಡು ಹೋರಾಟ ಮಾಡಿದರು ಎಂದು ಅವರು ಸ್ಮರಿಸಿದರು.
ಪಾಟೀಲ್ ಪುಟ್ಟಪ್ಪ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರಿಗೆ ಕರುಣಿಸಲಿ ಎಂದು ಪ್ರಾರ್ಥಿಸಿದರು.
ವಿರೋಧ ಪಕ್ಷದ ನಾಯಕ ಸಿದ್ಧರಾಮ್ಯಯ, ಕನ್ನಡದ ಕಟ್ಟಾಳು ಆಗಿದ್ದ ಪಾಟೀಲ್ ಪುಟ್ಟಪ್ಪ ಅವರ ನಿಧನದಿಂದ ಕನ್ನಡ ನಾಡು ಬಡವಾಗಿದೆ. ನಾಡು, ನುಡಿ, ಭಾಷೆ, ಜಲ, ಗಡಿ ಸಮಸ್ಯೆ ಉಂಟಾದಾಗ ಮುಂಚೂಣಿ ಹೋರಾಟ ನಡೆಸಿದ್ದರು ಎಂದು ಸ್ಮರಿಸಿದರು. ಪಾಟೀಲ್ ಪುಟ್ಟಪ್ಪನವರ ಸೇವೆಯನ್ನು ಪರಿಗಣಿಸಿ ಸ್ಮಾರಕವೊಂದನ್ನು ನಿರ್ಮಾಣ ಮಾಡುವುದು ಅವಶ್ಯ ಎಂದು ಸರ್ಕಾರಕ್ಕೆ ಸಲಹೆ ಮಾಡಿದರು.
ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಅಗಲಿಕೆ ದುಃಖ ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರಿಗೆ ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸಿದರು. ಉಪಮುಖ್ಯಮಂತ್ರಿ ಗೋವಿಂದ್‌ಕಾರಜೋಳ್, ಪಾಟೀಲ್ ಪುಟ್ಟಪ್ಪ ಅವರು ಬಸವತತ್ವ ವಾದಿಗಳಾಗಿದ್ದರು. ಕನ್ನಡದ ನಾಡು, ನುಡಿ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಕರ್ನಾಟಕ ಏಕೀಕರಣಕ್ಕಾಗಿ ಅವಿರತವಾಗಿ ಶ್ರಮಿಸಿದ್ದಾರೆ ಎಂದರು.
ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಪಾಪು ಅವರ ಹೋರಾಟ ಅವಿಸ್ಮರಣೀಯ. ಯಾವುದೇ ವಿಚಾರದಲ್ಲೂ ರಾಜಿ ಮಾಡಿಕೊಳ್ಳದ ಪಾಟೀಲ್ ಪುಟ್ಟಪ್ಪ ಉತ್ತರ ಕರ್ನಾಟಕಕ್ಕೆ ನೆಲೆ ತಂದುಕೊಟ್ಟಿದ್ದರು ಎಂದು ಸ್ಮರಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ಆರ್.ವಿ. ದೇಶಪಾಂಡೆ, ಹೆಚ್.ಕೆ. ಕುಮಾರಸ್ವಾಮಿ, ಅನ್ನದಾನಿ ಮತ್ತಿತರರು ಮೃತರ ಗುಣಗಾನ ಮಾಡಿ, ಆತ್ಮಕ್ಕೆ ಶಾಂತಿ ಕೋರಿದರು.
ಬಳಿಕ ಮೃತರ ಗೌರವಾರ್ಥ ಸದಸ್ಯರು ಎದ್ದು ನಿಂತು ಒಂದು ನಿಮಿಷ ಮೌನ ಆಚರಿಸಿದರು.

Leave a Comment