ಪಾಟ್ನಾ ಪ್ರವಾಹದ ಮಧ್ಯೆ ರೂಪದರ್ಶಿ ಫೋಟೋ ಶೂಟ್‌ಗೆ ಛೀಮಾರಿ

ಪಾಟ್ನಾ, ಸೆ. ೩೦- ಕಳೆದೊಂದು ವಾರದಿಂದ ಬಿಹಾರ, ಪಾಟ್ನಾ, ಸೇರಿದಂತೆ ವಿವಿದೆಡೆ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಆದರೆ ಭಾರಿ ಮಳೆಯಿಂದ ಉಂಟಾದ ಪ್ರವಾಹದ ಮಧ್ಯೆಯೇ ರೂಪದರ್ಶಿಯೊಬ್ಬಳು ನಗುನಗುತ್ತ ಫೋಟೋಶೂಟ್ ಮಾಡಿಸಿಕೊಂಡು ಛೀಮಾರಿ ಹಾಕಿಸಿಕೊಂಡಿದ್ದಾರೆ.
ಉತ್ತರ ಭಾರತದಲ್ಲಿ ಸುರಿಯುತ್ತಿರೋ ಮಳೆಗೆ ೧೦೦ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಬಿಹಾರವೊಂದರಲ್ಲೇ ೧೮ ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ. ಉತ್ತರಪ್ರದೇಶದಲ್ಲಿ ಗಂಟೆ ಗಂಟೆಗೂ ಸಾವಿನ ಸಂಖ್ಯೆ ಏರುತ್ತಲೆ ಇದೆ.
sಭಾರಿ ಮಳೆಯಿಂದಾಗಿ ಪಾಟ್ನಾದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಟ್ನಾ ಜನಜೀವನ ಮಳೆ, ಪ್ರವಾಹದಿಂದ ಅಸ್ತವ್ಯಸ್ತವಾಗಿದೆ. ಇಂತಹ ಸ್ಥಿತಿಯಲ್ಲಿ ರೂಪದರ್ಶಿ ಪ್ರವಾಹದ ಮಧ್ಯೆ ಕೆಂಪು ಉಡುಗೆ ತೊಟ್ಟು ಮಾಡಿಸಿಕೊಂಡಿರುವ ಫೋಟೋಶೂಟ್ ಇದೀಗ ಬಾರಿ ಚರ್ಚೆಗೆ ಗ್ರಾಸವಾಗಿದೆ. ಪಾಟ್ನಾದ ಯುವ ಛಾಯಾಗ್ರಾಹಕ ಸೌರವ್ ಪ್ರಕಾರ, ಪರಿಸ್ಥಿತಿಯನ್ನು ಜನರಿಗೆ ತಿಳಿಸಲು ಈ ಫೋಟೋಶೂಟ್ ಮಾಡಿದ್ದಾಗಿ ಹೇಳಿದ್ದಾರೆ. ಫೋಟೋಶೂಟ್ ನಲ್ಲಿ ಕಾಣಿಸಿಕೊಂಡ ಮಾಡೆಲ್ ಅದಿತಿ ಸಿಂಗ್. ಪಾಟ್ನಾದಲ್ಲಿ ಓದುತ್ತಿದ್ದಾಳೆ. ಅದಿತಿ ಫೋಟೋಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಕೆಂಡ ಕಾರಿದ್ದಾರೆ.
ಬಿಹಾರದಲ್ಲಿ ಏನೇ ಆದರೂ ಹೊರಗಿನ ಜನರು ತಲೆಕೆಡಿಸಿಕೊಳ್ಳುವುದಿಲ್ಲ. ಇದನ್ನು ತೋರಿಸಲು ಫೋಟೋಶೂಟ್ ಮಾಡಿದ್ದಾಗಿ ಸೌರವ್ ಹೇಳಿದ್ದಾರೆ. ಇನ್ಸ್ಟ್ರಾಗ್ರಾಮ್ ನಲ್ಲಿ ಈ ಫೋಟೋ ಜೊತೆ ಪಾಟ್ನಾ ಪರಿಸ್ಥಿತಿ ಹೇಗಿದೆ ಎಂಬುದನ್ನು ಸೌರವ್ ಹಂಚಿಕೊಂಡಿದ್ದಾರೆ. ಅಂಥ ಸ್ಥಳದಲ್ಲಿ ಫೋಟೋಶೂಟ್ ಮಾಡುವುದು ಸುಲಭವಲ್ಲ. ಪ್ರತಿಯೊಬ್ಬರೂ ಪ್ರತಿಯೊಂದನ್ನು ನೋಡುವ ರೀತಿ ಬೇರೆ ಬೇರೆ ಎಂದು ಸೌರವ್ ಹೇಳಿದ್ದಾರೆ. ಬಿಹಾರದಲ್ಲಿ ಭೀಕರ ಮಳೆಗೆ ರಸ್ತೆ ಹಾಗೂ ರೈಲು ಸಂಚಾರ ಅಸ್ತವ್ಯಸ್ತಗೊಂಡಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಸಾವಿರಾರು ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಹೀಗಿರುವಾಗ ಈ ಪೋಟೋಶೂಟ್ ಬೇಕಿತ್ತೆ ಎಂದು ನೆಟ್ಟಿಗರು ಛೀಮಾರಿ ಹಾಕಿದ್ದಾರೆ.

Leave a Comment