ಪಾಕ್ ಹೈಕಮೀಷನ್ ಮೂಲಕ ಪ್ರತ್ಯೇಕತಾವಾದಿಗಳಿಗೆ ಹಣ !

ನವದೆಹಲಿ, ಅ. ೨- ಹುರಿಯಾತ್ ನಾಯಕರಾದ ಸಯ್ಯದ್ ಅಲಿಶಾ ಗೀಲಾನಿ, ಶಬೀರ್ ಶಾ, ಯಾಸಿನ್ ಮಲಿಕ್, ಆಸಿಯಾ ಅಂದ್ರಾಬಿ ಮತ್ತು ಮಸಾರತ್ ಆಲಮ್ ಅವರಿಗೆ ಪಾಕಿಸ್ತಾನದಿಂದ ಹಣ ಹರಿದುಬರುತ್ತಿದೆ, ಹಾಗೂ ಅದನ್ನು ನವದೆಹಲಿಯಲ್ಲಿರುವ ಪಾಕಿಸ್ತಾನ್ ಹೈಕಮೀಷನ್ ಮೂಲಕ ಪಡೆಯುತ್ತಿದ್ದಾರೆ ಎಂಬುದನ್ನು ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ಪತ್ತೆ ಮಾಡಿದೆ.

ಹಣವನ್ನು ಪಾಕ್ ಹೈಕಮೀಷನ್ ಮಾತ್ರವಲ್ಲದೆ ಗಡಿ ನಿಯಂತ್ರಣ ರೇಖೆ ಬಳಿ ಬೀಡು ಬಿಟ್ಟಿರುವ ಭಯೋತ್ಪಾದಕ ಸಂಘಟನೆಗಳು ಮತ್ತು ಹವಾಲಾ ಹಾದಿಗಳಿಂದಲೂ ಪಡೆಯಲಾಗುತ್ತಿದೆ ಎಂದೂ ಏಜೆನ್ಸಿ ಹೇಳಿದೆ.

ಜಮ್ಮು- ಕಾಶ್ಮೀರ ಭಯೋತ್ಪಾದನಾ ನಿಧಿ ಕೇಸಿಗೆ ಸಂಬಂಧಿಸಿದಂತೆ ಎನ್‌ಐಎ ಸದ್ಯದಲ್ಲೇ ಜೆಕೆಎಲ್‌ಎಫ್‌ನ ಯಾಸಿನ್ ಮಲಿಕ್, ಶಬೀರ್ ಶಾ (ಜಮ್ಮು- ಕಾಶ್ಮೀರ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ) ದುಖ್ತಾರನ್ -ಎ- ಮಿಲಾತ್‌ನ ನಾಯಕಿ ಅಂದ್ರಾಬಿ ಮತ್ತು ಹುರಿಯಾತ್ ಕಾನ್ಫರೆನ್ಸ್‌ನ ಸರ್ವಪಕ್ಷಗಳ ಕಾರ್ಯದರ್ಶಿ ಮಸರತ್ ಆಲಮ್ ಅವರ ವಿರುದ್ಧದ ಆರೋಪ ಪಟ್ಟಿಯಲ್ಲಿ ಬಹಿರಂಗ ಗೊಳಿಸಲಿದೆ.

ಕಳೆದ ವರ್ಷವೂ ಭಯೋತ್ಪಾದನಾ ನಿಧಿಗೆ ಸಂಬಂಧಿಸಿದಂತೆ ಎನ್‌ಐಎ ಎರಡು ವರದಿಗಳನ್ನು ಸಲ್ಲಿಸಿದ್ದು ಇದು ಮೂರನೆಯದಾಗಿದೆ. ಎನ್‌ಐಎ ಸರ್ಕಾರಕ್ಕೆ ನಾಳೆ (ಅ. 3) ತನ್ನ ವರದಿಯನ್ನು ಸಲ್ಲಿಸಲಿದೆ.

ಹುರಿಯಾತ್ ನಾಯಕರ ಹುನ್ನಾರಗಳ ಪತ್ತೆಗೆ ಎನ್‌ಐಎ ಇ-ಮೇಲ್, ವಿಡಿಯೋಗಳು, ಟಿ.ವಿ. ಸಂದರ್ಶನಗಳು, ಸಾರ್ವಜನಿಕ ಭಾಷಣಗಳನ್ನು ಆಧರಿಸಿ ವರದಿ ಸಿದ್ಧಪಡಿಸಿದೆ.

ಕೆಲವು ವರ್ಷಗಳ ಹಿಂದೆ ಯಾಸಿನ್ ಮಲಿಕ್ ಟಿವಿ ಸಂದರ್ಶನವೊಂದರಲ್ಲಿ ತಾನು ಪಾಕ್ ಆಕ್ರಮಿತ ಕಾಶ್ಮೀರದ ಮೂರಿ ಎಂಬಲ್ಲಿದ್ದ ಲಷ್ಕರ್- ಎ- ತೊಯ್ಬಾ ಸಂಘಟನೆಯ ಶಿಬಿರಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಿದ್ದಾಗಿಯೂ ಹೇಳಿದ್ದರು.

ಇದೇ ಪ್ರತ್ಯೇಕತಾವಾದಿ ನಾಯಕರನ್ನು ಪಾಕಿಸ್ತಾನದಲ್ಲಿರುವವರು ನಿಯಂತ್ರಿಸುತ್ತಿದ್ದು, ಇವರೂ ಗ್ರಾಮ, ಬ್ಲಾಕ್ ಮತ್ತು ಜಿಲ್ಲಾ ಮಟ್ಟಗಳಲ್ಲಿ ತಮ್ಮದೇ ಆದ ಜಾಲಗಳನ್ನು ಹೊಂದಿದ್ದಾರೆ ಎಂಬುದನ್ನು ಎನ್‌ಐಎ ಪತ್ತೆ ಹಚ್ಚಿದ್ದು ಇವರೆಲ್ಲರೂ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದಾರೆ.

ಭಯೋತ್ಪಾದಕರ ಚಟುವಟಿಕೆಗಳನ್ನು ಅವರು ಶ್ಲಾಘಿಸುತ್ತಾರೆ. ಅವರ ಅಂತ್ಯ ಸಂಸ್ಕಾರಗಳಿಗೆ ಹೋಗಿ ಅಲ್ಲಿ ದ್ವೇಷಪೂರಿತ ಮತ್ತು ಪ್ರಚೋದನಾತ್ಮಕ ಭಾಷಣಗಳನ್ನು ಮಾಡುತ್ತಾರೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇಂಥ ಭಾಷಣಗಳನ್ನು ಮಾಡುವಾಗಲೇ ಯುವಕರನ್ನು ಉಗ್ರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುತ್ತಾರೆ. ಇಲ್ಲದೆಯೇ ಇರುವ ಹಲವಾರು ವಿಷಯಗಳನ್ನು ನಡೆಸುವಂತೆ ಪ್ರಚೋದಿಸುತ್ತಾರೆ. ಇಂಥ ಚಟುವಟಿಕೆಗೆ ಇಳಿದ ಯುವಕರು ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುತ್ತಾರೆ ಎಂದೂ ವರದಿ ತಿಳಿಸಿದೆ.

Leave a Comment