ಪಾಕ್ ಸೇನೆ ಕದನ ವಿರಾಮ ಉಲ್ಲಂಘನೆ

ಜಮ್ಮು, ಜ. ೯- ಜಮ್ಮು ಮತ್ತು ಕಾಶ್ಮೀರದ ಗಡಿನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಸೇನೆಯಿಂದ ಎರಡನೇ ದಿನವಾದ ಇಂದು ಕದನ ವಿರಾಮ ಉಲ್ಲಂಘನೆಯಾಗಿದ್ದು, ಭಾರತದ ಮುಂಚೂಣಿ ನೆಲೆಗಳ ಮೇಲೆ ಗುಂಡಿನ ದಾಳಿ ಮತ್ತು ಮಾರ್ಟರ್ ಶೆಲ್ ದಾಳಿ ನಡೆಸಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೂಂಚ್ ಜಿಲ್ಲೆಯ ಗುಲ್‌ಪುರ್ ಮತ್ತು ಖಾದಿ ಕರ್ಮಾರದಲ್ಲಿನ ಸೇನಾ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನಿ ಪಡೆಗಳು ಗುಂಡಿನ ದಾಳಿ ನಡೆಸಿವೆ ಎಂದು ಅವರು ತಿಳಿಸಿದ್ದಾರೆ.

ಪೂಂಚ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ 9ರ ಸಮಯದಲ್ಲಿ ಪಾಕಿಸ್ತಾನ ಪಡೆಗಳಿಂದ ಅಪ್ರಚೋದಿತ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘಿಸಲಾಗಿದೆ ಎಂದು ಅವರು ಹೇಳಿದ್ದು, ಇದಕ್ಕೆ ಭಾರತೀಯ ಸೇನೆಯಿಂದಲೂ ತಕ್ಕ ಉತ್ತರ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ಕಡೆಯಿಂದ ಶೆಲ್ ದಾಳಿ ಜೊತೆಗೆ ಇತರೆ ಪ್ರಬಲ ಶಸ್ತ್ರಗಳ ಮೂಲಕ ದಾಳಿ ನಡೆದಿದೆ ಎಂದು ಅವರು ಹೇಳಿದ್ದಾರೆ.

2003 ರಲ್ಲಿ ಭಾರತದೊಂದಿಗೆ ಮಾಡಿಕೊಂಡ ಕದನ ವಿರಾಮವನ್ನು ಉಲ್ಲಂಘಿಸುವ ಪ್ರಕ್ರಿಯೆಯನ್ನು ಪಾಕಿಸ್ತಾನ ಪದೇಪದೇ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ನಿನ್ನೆ ಸೇರಿದಂತೆ, ಕಳೆದ 7 ದಿನಗಳಿಂದ ಪಾಕಿಸ್ತಾನ ಪಡೆಗಳು ಗಡಿನಿಯಂತ್ರಣ ರೇಖೆಯುದ್ಧಕ್ಕೂ ಗುಂಡಿನ ದಾಳಿ ನಡೆಸಿದೆ. 2018 ರಲ್ಲಿ 2,936 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದ ಪ್ರಕರಣಗಳು ನಡೆದಿದ್ದು, ಕಳೆದ 15 ವರ್ಷಗಳಿಂದೀಚೆಗೆ ಈ ಪ್ರಮಾಣ ಅತಿಹೆಚ್ಚು ಎಂದು ಹೇಳಲಾಗಿದೆ. ಕಳೆದ ಒಂದು ವಾರದಲ್ಲಿ ಪಾಕಿಸ್ತಾನ ಪಡೆಗಳು ಮನ್ ಕೋಟೆ, ಖಾದಿ ಕರ್ಮಾರ, ಗುಲ್ ಪುರ್ ಪ್ರದೇಶಗಳಲ್ಲಿನ ಮುಂಚೂಣಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ.

ಈ ದಾಳಿಗಳಲ್ಲಿ ಯಾವುದೇ ಸಾವು – ನೋವು ಸಂಭವಿಸಿಲ್ಲ. ಉತ್ತರ ವಿಭಾಗದ ಕಮಾಂಡ್ ಚೀಫ್ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಸೋಮವಾರ ಈ ಪ್ರದೇಶಗಳಿಗೆ ಭೇಟಿನೀಡಿ ರಜೌರಿ ಜಿಲ್ಲೆಗಳಲ್ಲಿನ ಭದ್ರತಾ ವ್ಯವಸ್ಥೆ ಕುರಿತು ಪರಾಮರ್ಶೆ ನಡೆಸಿದರು.

ಶೀತಗಾಳಿ

ಕಾಶ್ಮೀರದಲ್ಲಿ ಶೀತಗಾಳಿ ಮುಂದುವರೆದಿದ್ದು, ಕನಿಷ್ಟ ತಾಪಮಾನ ಮೈನಸ್ 10 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆಯಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿ ಎಂದೇ ಪ್ರಸಿದ್ಧಿಯಾಗಿರುವ ಶ್ರೀನಗರದಲ್ಲಿ ಕನಿಷ್ಟ ತಾಪಮಾನ ಮೈನಸ್ 3 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಕ್ವಾಜಿಗುಂಡ್‌ನಲ್ಲಿ ಮೈನಸ್ 2.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಕಳೆದ ರಾತ್ರಿಗಿಂತ ಇದು ಒಂದು ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ.

Leave a Comment