ಪಾಕ್ ಮೇಲೆ ಕೇಂದ್ರಕ್ಕೆ ಪ್ರೀತಿ – ನಟಿ ಸ್ವರಾ ಭಾಸ್ಕರ್

ಮುಂಬೈ, ಫೆ ೩- ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರಕ್ಕೆ ಪಾಕಿಸ್ತಾನದ ಮೇಲೆ ಒಂಥರ ಪ್ರೀತಿ, ಒಲವು ಇದೆ ಎಂದು ನಟಿ ಸ್ವರಾ ಭಾಸ್ಕರ್ ಟೀಕಿಸಿದ್ದಾರೆ.
ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಸಂವಿಧಾನ ಉಳಿಸಿ ದೇಶ ರಕ್ಷಿಸಿ ಎಂಬ ಸಿಎಎ ವಿರೋಧಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ನಟಿ ಸ್ವರಾ ಭಾಸ್ಕರ್ ಅವರು ಕೇಂದ್ರಕ್ಕೆ ಪಾಕ್ ಮೇಲಿರುವ ಪ್ರೀತಿ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.
ಕೇವಲ ನಾಲ್ಕು ವರ್ಷಗಳ ಹಿಂದೆ ಭಾರತೀಯ ಪೌರತ್ವ ಪಡೆದ ಪಾಕ್ ಮೂಲದ ಹಿನ್ನಲೆ ಗಾಯಕ ಅದ್ನಾನ್ ಸಾಮಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡುವ ಮೂಲಕ ಕೇಂದ್ರ ಸರ್ಕಾರ ಪಾಕ್ ಪ್ರೇಮ ಮೆರೆದಿದೆ ಎಂದು ನಟಿ ಸ್ವರಾ ಭಾಸ್ಕರ್ ಆರೋಪಿಸಿದ್ದಾರೆ. ಈ ಸಾಲಿನಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಲ್ಲಿ ಅದ್ನಾನ್ ಸಾಮಿ ಹೆಸರೂ ಸೇರಿರುವುದು ಅನೇಕ ಬಾಲಿವುಡ್ ಮಂದಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಲಂಡನ್‌ನಲ್ಲಿ ಜನಿಸಿದ ಅದ್ನಾನ್ ಪಾಕಿಸ್ತಾನದ ವಾಯುಪಡೆ ನಿವೃತ್ತ ಅಧಿಕಾರಿಯ ಪುತ್ರರಾಗಿದ್ದಾರೆ. ೨೦೧೫ರಲ್ಲಿ ಅದ್ನಾನ್ ಸಮಿ ಭಾರತೀಯ ಪೌರತ್ವ ಕೋರಿ ಅರ್ಜಿ ಸಲ್ಲಿಸಿದರು. ೨೦೧೬ರಲ್ಲೇ ಅದ್ನಾನ್ ಅವರಿಗೆ ಕೇಂದ್ರ ಪೌರತ್ವ ಒದಗಿಸುತ್ತದೆ. ಇದೀಗ ೧೧೮ ಮಂದಿ ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ ಅದ್ನಾನ್ ಕೂಡಾ ಸೇರುವ ಮೂಲಕ ಬಿಜೆಪಿ ಪಾಕಿಸ್ತಾನ ಪ್ರೇಮ ತೋರಿದೆ ಎಂದು ಸ್ವರಾ ಭಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಳನುಸುಳುಕೋರರನ್ನ ದೇಶದಿಂದ ಹೊರಹಾಕಲು ಸಿಎಎ ಮಸೂದೆ ಎನ್ನುತ್ತಲೇ ಕೇಂದ್ರ ಅದ್ನಾನ್ ಅಂತವರಿಗೆ ಪೌರತ್ವ ನೀಡುವ ಮೂಲಕ ಇಬ್ಬಂಗಿತನ ಪ್ರದರ್ಶಿಸಿದೆ ಎಂದು ನಟಿ ಆರೋಪಿಸಿದ್ದಾರೆ.
ಸಿಎಎ ಜಾರಿಗೆ ತರುವ ಮೂಲಕ ದೇಶದ ಸಂವಿಧಾನದ ಆಶಯಗಳಿಗೆ ದ್ರೋಹ ಎಸಗಲಾಗಿದೆ ಎಂದು ಸ್ವರಾ ಭಾಸ್ಕರ್ ಕೇಂದ್ರ ಸರಕಾರಕ್ಕೆ ತಿರುಗೇಟು ನೀಡಿದ್ದಾರೆ.

Leave a Comment