ಪಾಕ್- ಭಾರತ ಪಂದ್ಯ: ರಸ್ತೆಗಳು ಬಿಕೊ, ಪೂಜೆ ಪುನಸ್ಕಾರ

ಬೆಂಗಳೂರು, ಜೂ ೧೬- ಹೈ ವೋಲ್ಟೇಜ್ ಪಂದ್ಯ ಎಂದೇ ಬಣ್ಣಿಸಲಾಗಿರುವ ಇಂಡಿಯಾ-ಪಾಕಿಸ್ತಾನ ಪಂದ್ಯ ಲಂಡನ್ ನ ಮ್ಯಾಂಚೆಸ್ಟರ್ ಕ್ರೀಡಾಂಗಣ ದಲ್ಲಿ ಆರಂಭವಾಗುತ್ತಿದ್ದಂತೆ ಬೆಂಗಳೂರು ನಗರ ಸೇರಿದಂತೆ ದೇಶದ ಎಲ್ಲಾ ನಗರಗಳ ರಸ್ತೆಗಳು ಸಂಚಾರವಿಲ್ಲದೇ ಸ್ತಬ್ದಗೊಂಡಿವೆ. ನಗರದ ಎಲ್ಲಾ ರಸ್ತೆಗಳು ಬಿಕೋ ಎನ್ನಲಾರಂಭಿಸಿವೆ.
ಪಂದ್ಯ ಆರಂಭಕ್ಕೂ ಮುನ್ನವೇ ದೇಶದ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯದಲ್ಲಿ ಭಾರತವೇ ಗೆಲ್ಲುವಂತೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬ್ಯಾಟ್ ಮತ್ತು ಚೆಂಡಿಗೂ ಪೂಜೆ ಸಲ್ಲಿಸಿ ಭಾರತ ತಂಡಕ್ಕೆ ಶುಭ ಕೋರಿದ್ದಾರೆ.
ಕರ್ನಾಟಕದ ವಿವಿಧ ನಗರಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಭಾರತದ ಪರ ಘೋಷಣೆಗಳನ್ನು ಕೂಗಿದ್ದಾರೆ. ಕೋಲಾರ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನೂರಾರು ಕ್ರೀಡಾಭಿಮಾನಿಗಳು ಕ್ರೀಡಾಂಗಣದಲ್ಲಿ ವಿಕೆಟ್ ಮತ್ತು ಬ್ಯಾಟ್ ಗಳಿಗೆ ಪೂಜೆ ಸಲ್ಲಿಸಿ ಭಾರತ ತಂಡ ಗೆದ್ದು ಬರಲಿ ಎಂದು ಜಯಕಾರ ಹಾಕಿದ್ದಾರೆ.
ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನ ವಿರುದ್ಧ ಈ ಹಿಂದೆ ನಡೆದಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಜಯಗಳಿಸಿದೆ. ಈ ಬಾರಿಯೂ ಸಹ ಗೆದ್ದು ಇತಿಹಾಸ ನಿರ್ಮಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಅಭಿಮಾನಿಗಳು ನಗರದ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರಲ್ಲದೆ ಬ್ಯಾಟ್ ಮತ್ತು ಚೆಂಡಿಗೂ ಪೂಜೆ ಮಾಡಿದ್ದಾರೆ.
ಹುಬ್ಬಳ್ಳಿಯ ಫತೆಷಾವಲಿ ದರ್ಗಾದಲ್ಲಿ ಮುಸಲ್ಮಾನರು ಕೂಡ ಕ್ರಿಕೆಟ್‍ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯಗಳಿಸಲೆಂದು ಪ್ರಾರ್ಥನೆ ಸಲ್ಲಿಸಿರುವುದು ವಿಶೇಷವಾಗಿದೆ.
ಕಲಬುರಗಿ ನಗರದ ಶಾಹಬಜಾರ ಲಾಲ್ ಹನುಮಾನ್ ದೇವಸ್ಥಾನದಲ್ಲಿ ವೀರಶೈವ ಲಿಂಗಾಯತ ಸ್ವಾಭಿಮಾನಿ ಬಳಗದ ಅಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಜೈ ಹೋ ಟೀಂ ಇಂಡಿಯಾ ಎಂದು ಕ್ರಿಕೆಟ್ ಅಭಿಮಾನಿಗಳು ಜೈ ಕಾರಗಳನ್ನು ಮೊಳಗಿಸಿ ಇಂಡಿಯಾ ಟೀಂಗೆ ಶುಭ ಕೋರಿದ್ದಾರೆ.
ಗದುಗಿನ ಪುಟ್ಟರಾಜ ಗವಾಯಿಗಳ ವೀರೇಶ್ವರ ಪುಣ್ಯಾಶ್ರಮದಲ್ಲಿ ಶಾಲಾ ಮಕ್ಕಳು ಭಾರತದ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಲಿಂಗೈಕ್ಯ, ಪಂಡಿತ್ ಪುಟ್ಟರಾಜ್ ಗವಾಯಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಮಾಡಿ, ಗೆಲ್ಲಲಿ ಗೆಲ್ಲಲಿ…ಇಂಡಿಯಾ ಗೆಲ್ಲಲಿ, ಜೀತೆಗಾ ಜೀತೇಗಾ… ಇಂಡಿಯಾ ಜೀತೆಗಾ ಎಂದು ಗದಗ್‍ನ ಪುಣ್ಯಾಶ್ರಮದ ಶಾಲಾ ಮಕ್ಕಳು ಘೋಷಣೆ ಕೂಗಿದ್ದಾರೆ.

Leave a Comment