ಪಾಕ್‍ ವಶದಲ್ಲಿರುವ ಭಾರತೀಯ ಮೀನುಗಾರರ ಬಿಡುಗಡೆಗೆ ರಾಜ್ಯಸಭೆಯಲ್ಲಿ ಒತ್ತಾಯ

ನವದೆಹಲಿ, ಜುಲೈ 15 – ಪಾಕಿಸ್ತಾನದ ಕರಾಚಿ ಜೈಲಿನಲ್ಲಿ ಬಂಧಿಯಾಗಿರುವ 483 ಭಾರತೀಯ ಮೀನುಗಾರರ ಬಿಡುಗಡೆಗೆ ಸೋಮವಾರ ರಾಜ್ಯಸಭೆಯಲ್ಲಿ ಬೇಡಿಕೆ ಮಂಡಿಸಲಾಯಿತು.
ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ವಿ ವಿಜಯಸಾಯಿ ರೆಡ್ಡಿ ಪ್ರಶ್ನೋತ್ತರ ಅವಧಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯದ 12 ಹಾಗೂ ನವೆಂಬರ್ ನಲ್ಲಿ 34 ಮೀನುಗಾರರನ್ನು ಪಾಕಿಸ್ತಾನ ಸಮುದ್ರ ತೀರದ ಪೊಲೀಸರು ಬಂಧಿಸಿ ಕರಾಚಿ ಜೈಲಿನಲ್ಲಿ ಇರಿಸಿದ್ದಾರೆ. ಹೀಗೆ ಒಟ್ಟು 483 ಭಾರತೀಯ ಮೀನುಗಾರರು ಕರಾಚಿ ಜೈಲಿನಲ್ಲಿ ಬಂಧಿಯಾಗಿದ್ದು, ಇದುವರೆಗೂ ಅವರನ್ನು ಬಿಡುಗಡೆಗೊಳಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಮೀನುಗಾರರ ಕುಟುಂಬದೊಂದಿಗೆ ಭೇಟಿ ಮಾಡಿದ್ದೆ. ಬಿಡುಗಡೆ ಕುರಿತು ಪಾಕ್ ನೊಂದಿಗೆ ಮಾತುಕತೆ ನಡೆಸುವುದಾಗಿ ಅವರು ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೂ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಜೈಲಿನಿಂದ ಮೀನುಗಾರರನ್ನು ಮುಕ್ತಗೊಳಿಸುವುದಕ್ಕಾಗಿ ಪಾಕಿಸ್ತಾನದ ಮೇಲೆ ಒತ್ತಡ ತರಬೇಕು. ಅಲ್ಲದೇ, ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಜೈಲಿನಲ್ಲಿ ಮೀನುಗಾರರನ್ನು ಭೇಟಿ ಮಾಡಲು ಅವಕಾಶ ಸಿಗುವಂತಾಗಬೇಕು ಎಂದು ಅವರು ಒತ್ತಾಯಿಸಿದರು.

Leave a Comment