ಪಾಕ್‌ನಲ್ಲಿ ಭಯೋತ್ಪಾದನಾ ಮುಕ್ತ ಕೇಂದ್ರ ನಿರ್ಮಾಣ

ನವದೆಹಲಿ, ಜ. ೨೨- ಭಯತ್ಪಾದನೆಗೆ ಕುಮ್ಮಕ್ಕು ನೀಡುವುದರಿಂದ ದೇಶದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಮೇಲಾಗುವ ವ್ಯತಿರಿಕ್ತ ಪರಿಣಾಮದಿಂದ ಕೊನೆಗೂ ಪಾಕಿಸ್ತಾನ ಎಚ್ಚೆತ್ತುಕೊಂಡಿರುವಂತೆ ಕಾಣುತ್ತಿದ್ದು, ಹಲವು ಆಮಿಷಕ್ಕೊಳಗಾಗಿ ಭಯೋತ್ಪಾದನೆಗಿಳಿಯುತ್ತಿದ್ದ ಯುವಕರನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸಲು ಮುಂದಾಗಿದೆ.
ದೇಶದ ಸಾವಿರಾರು ಯುವಕರು ಆಮಿಷಗಳಿಗೆ ಬಲಿಯಾಗಿ ಭಯೋತ್ಪಾದನೆಯಂತಹ ದುಷ್ಕೃತ್ಯಗಳು ಹಾಗೂ ಉಗ್ರಸಂಘಟನೆಗಳೊಂದಿಗೆ ಪಾಕ್‌ನಲ್ಲಿ ಕೈಜೋಡಿಸುತ್ತಿದುದು ಸರ್ವೆ ಸಾಮಾನ್ಯವಾಗಿತ್ತು ಹಾಗೂ ಪಾಕ್ ಸರ್ಕಾರ ಸಹ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ವಿಶ್ವಸಂಸ್ಥೆಯ ಎಚ್ಚರಿಕೆಯ ನಡುವೆಯೂ ನಿರ್ಲಕ್ಷ್ಯದಿಂದ ವರ್ತಿಸುತ್ತಿತ್ತು. ಆದರೆ, ದೇಶದ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಪರಿಸ್ಥಿತಿಯ ಮೇಲೆ ತೀವ್ರ ಪರಿಣಾಮ ಉಂಟಾಗಿರುವ ಹಿನ್ನೆಲೆ ಭಯೋತ್ಪಾದನಾ ನಿರ್ಮೂಲನಾ ಶಿಬಿರಗಳಿಗೆ ಯುವಕರನ್ನು ಸೆಳೆಯುವ ಮೂಲಕ ಯುವಕರನ್ನು ಭಯೋತ್ಪಾದನಾ ಮುಕ್ತಗೊಳಿಸಲು ಮುಂದಾಗಿದೆ.
ಭಾರತೀಯ ಗುಪ್ತಚರ ಸಂಸ್ಥೆಗಳು ಈ ವಿಷಯವನ್ನು ಬಹಿರಂಗಪಡಿಸಿದೆ. ಗುಪ್ತಚರ ಸಂಸ್ಥೆಯ ಮೌಲ್ಯಮಾಪನದನ್ವಯ ಪಾಕಿಸ್ತಾನದ ಪಂಜಾಬ್, ಬಲೂಚಿಸ್ತಾನ್, ಖೈಬರ್, ಪಕ್ಹಾತುನ್ಕಾವ ಪ್ರದೇಶಗಳಲ್ಲಿ ೭೦೦ ಜನರ ಸಾಮರ್ಥ್ಯವುಳ್ಳ ಡಜನ್‌ಗೂ ಅಧಿಕ ಭಯೋತ್ಪಾದನಾ ಶಿಬಿರಗಳನ್ನು ಆರಂಭಿಸಿರುವುದಾಗಿ ಮಾಹಿತಿ ನೀಡಿದೆ.
ಈ ಶಿಬಿರಗಳಲ್ಲಿ ಸಾವಿರಾರು ಯುವಕರ ಅಗತ್ಯತೆಗಳನ್ನು ಪೂರೈಸಲು ಅಗತ್ಯವಿರುವ ನೂತನ ಮೂಲಭೂತ ಸೌಕರ್ಯಗಳೊಂದಿಗೆ ವಿಸ್ತಾರವಾದ ಕ್ಯಾಂಪ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ಪಾಕಿಸ್ತಾನ ಭಯೋತ್ಪಾದಕರಿಂದ ಆಮಿಷಕ್ಕೊಳಗಾಗಿರುವ ಸಾವಿರಾರು ಯುವಕರನ್ನು ಈ ಡಿ ಱ್ಯಾಡಿಕಲೈಜೇಷನ್ ಕ್ಯಾಂಪ್ ಎಂಬ ಕೇಂದ್ರಗಳಿಗೆ ಕರೆದೊಯ್ಯಲಾಗುತ್ತಿದೆ.
ಈ ಕೇಂದ್ರಗಳಲ್ಲಿ ಹೆಚ್ಚು ಹೆಚ್ಚು ಜನರು ವಾಸಿಸಲು ಅನುಕೂಲವಾಗುವಂತೆ ವ್ಯವಸ್ಥೆಗೊಳಿಸಲಾಗುತ್ತದೆ ಹಾಗೂ ಈ ಶಿಬಿರಗಳನ್ನು ವಿಸ್ತರಿಸುವ ಕುರಿತು ಉಪಗ್ರಹ ಚಿತ್ರಗಳನ್ನೂ ಸಹ ಭಾರತೀಯ ಗುಪ್ತಚರ ಸಂಸ್ಥೆಗಳು ಸಂಗ್ರಹಿಸಿವೆ. ಹಿಂಸಾತ್ಮಕ ಸಿದ್ಧಾಂತಗಳಿಗೆ ಬಲಿಯಾಗುತ್ತಿದ್ದ ಸಾವಿರಾರು ಯುವಕರ ಅಗತ್ಯತೆಗಳನ್ನು ಪೂರೈಸುವ ಮೂಲ ಉದ್ದೇಶವನ್ನು ಡಿ ಱ್ಯಾಡಿಕಲೈಜೇಷನ್ ಕೇಂದ್ರಗಳು ಹೊಂದಿವೆ ಎನ್ನಲಾಗಿದ್ದು, ಈ ಶಿಬಿರಗಳಲ್ಲಿ ಶೇ. ೯೨ರಷ್ಟು ಮಂದಿ ೩೨ ವಯಸ್ಸಿಗಿಂತ ಕಡಿಮೆ ವಯಸ್ಸಿನವರು ಮತ್ತು ಶೇ. ೧೨ರಷ್ಟು ವಯಸ್ಕರಲ್ಲ ಎಂದು ಹೇಳಲಾಗಿದೆ.
ಈ ಶಿಬಿರಗಳಿಗೆ ಸೇರ್ಪಡೆಯಾಗುತ್ತಿರು ವವರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆ, ಪಾಕ್‌ಗೆ ಭಯೋತ್ಪಾದನೆ ನಿಗ್ರಹ ಸಾಧ್ಯವಾಗುತ್ತಿಲ್ಲ ಎಂದು ಭದ್ರತಾ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave a Comment