ಪಾಕಿಸ್ತಾನ 239ಕ್ಕೆ ಆಲೌಟ್: ಆಸೀಸ್‍ಗೆ ಇನಿಂಗ್ಸ್, 48 ರನ್ ಜಯ

ಅಡಿಲೇಡ್, ಡಿ 2 – ನಥಾನ್ ಲಿಯಾನ್ (69 ಕ್ಕೆ 5) ಅವರ ಐದು ವಿಕೆಟ್ ಗೊಂಚಲು ನೆರವಿನಿಂದ ಆಸ್ಟ್ರೇಲಿಯಾ ತಂಡ ಎರಡನೇ ಹಾಗೂ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ತಾನದ ವಿರುದ್ಧ ಇನಿಂಗ್ಸ್ ಹಾಗೂ 48 ರನ್ ಗಳಿಂದ ಜಯ ಸಾಧಿಸಿತು. ಇದರೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಟಿಮ್ ಪೈನ್ ಪಡೆ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು.

ಸೋಮವಾರ ಮೂರು ವಿಕೆಟ್ ಕಳೆದುಕೊಂಡು 39 ರನ್ ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಪಾಕಿಸ್ತಾನ 82 ಓವರ್ ಗಳಿಗೆ 239 ರನ್ ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಇನ್ನೂ ಒಂದು ದಿನ ಬಾಕಿ ಇರುವಾಗಲೇ ಇನಿಂಗ್ಸ್ ಹಾಗೂ 48 ರನ್ ಗಳಿಂದ ಪರಾಭವಗೊಂಡಿತು.

ಪಾಕಿಸ್ತಾನದ ಪರ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಶಾನ್ ಮಸೂದ್ 127 ಎಸೆತಗಳಲ್ಲಿ 68 ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಅಸಾದ್ ಶಫಿಕ್ 112 ಎಸೆತಗಳಲ್ಲಿ ಐದು ಬೌಂಡರಿಯೊಂದಿಗೆ 57 ರನ್ ಗಳಸಿದು. ಮೊಹಮ್ಮದ್ ರಿಜ್ವಾನ್ 45 ರನ್ ಗಳಿಸಿದರು.ಆದರೆ, ಇಮಾಮ್ ಉಲ್ ಹಕ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಅಜರ್ ಅಲಿ ಹಾಗೂ ಬಾಬರ್ ಅಜಮ್ ಎರಡಂಕಿ ಮೊತ್ತ ದಾಖಲಿಸುವಲ್ಲಿ ವಿಫಲರಾದರು.

ಆಸೀಸ್ ಪರ ಉತ್ತಮ ಬೌಲಿಂಗ್ ಮಾಡಿದ ಸ್ಪಿನ್ನರ್ ನಥಾನ್ ಲಿಯಾನ್ 69 ರನ್ ನೀಡಿ ಐದು ವಿಕೆಟ್ ಕಿತ್ತರು. ಇವರಿಗೆ ಸಾಥ್ ನೀಡಿದ ಜೋಶ್ ಹೇಜಲ್‍ವುಡ್ ಮೂರು ವಿಕೆಟ್ ಪಡೆದರು. ಆಸ್ಟ್ರೇಲಿಯಾ ತಂಡ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕಪಟ್ಟಿಯಲ್ಲಿ 176 ಅಂಕಗಳ ನೆರವಿನಿಂದ ಭಾರತ(360)ದ ನಂತರ ಎರಡನೇ ಸ್ಥಾನದಲ್ಲಿದೆ.

ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ
ಪ್ರಥಮ ಇನಿಂಗ್ಸ್: 589/3 (ಡಿ)

ಪಾಕಿಸ್ತಾನ
ಪ್ರಥಮ ಇನಿಂಗ್ಸ್: 302
ದ್ವಿತೀಯ ಇನಿಂಗ್ಸ್: 239/10 (ಶಾನ್ ಮಸೂದ್ 68, ಅಸಾದ್ ಶಫೀಕ್ 57, ಮೊಹಮ್ಮದ್ ರಿಜ್ವಾನ್ 45; ನಥಾನ್ ಲಿಯಾನ್ 69 ಕ್ಕೆ 5, ಜೋಶ್ ಹೇಜಲ್‍ವುಡ್ 63 ಕ್ಕೆ 3, ಮಿಚೆಲ್ ಸ್ಟಾರ್ಕ್ 47 ಕ್ಕೆ 1)

Leave a Comment