ಪಶ್ಚಿಮಘಟ್ಟ ಉಳಿಸಿದರೆ ಬಯಲು ಸೀಮೆ ಹಸಿರಾಗಲು ಸಾಧ್ಯ

ದಾವಣಗೆರೆ, ಸೆ. 8 – ಮಲೆನಾಡ ಹಸಿರು ಬಯಲು ಸೀಮೆಯ ಉಸಿರು ಅದಕ್ಕಾಗಿ ಪಶ್ಚಿಮಘಟ್ಟ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಅಪ್ಪಿಕೋ ಚಳುವಳಿಯ ಪಾಂಡುರಂಗ ಹೆಗಡೆ ಮನವರಿಕೆ ಮಾಡಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿಂದು ಪಶ್ಚಿಮ ಘಟ್ಟ ಉಳಿಸಿ ಅಭಿಯಾನ, ಶಿವಮೊಗ್ಗ ಪರಿಸರ ಅಧ್ಯಯನ ಕೇಂದ್ರ, ಶಿರಸಿಯ ಪ್ರಕೃತಿ, ದಾವಣಗೆರೆಯ ಸಾಮಾಜಿಕ ಅರಣ್ಯ ಇಲಾಖೆ, ಫೆವಾರ್ಡ್ ಸ್ಪೂರ್ತಿ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ 35ನೇ ವರ್ಷದ ಸಹ್ಯಾದ್ರಿ ದಿನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ನಾಲ್ಕು ವರ್ಷದ ಕೆಳಗೆ ಬರಗಾಲ ಆವರಿಸಿದ್ದ ವೇಳೆ ಮಲೆನಾಡಿನಲ್ಲಿಯೂ ಸಹ ಕುಡಿಯುವ ನೀರಿಗೆ ತೊಂದರೆ ಉಂಟಾಗಿತ್ತು. ಇಂತಹ ಗಂಭೀರತೆಗೆ ಕಾರಣ ಕಾಡಿನ ನಾಶ. ಈ ಹಿಂದೆಯೇ ಹಸಿರು ಉಳಿಸಿ ಅಭಿಯಾನ ಪ್ರಾರಂಭಗೊಂಡಿದ್ದು ಸುಂದರ್ ಲಾಲ್ ಬಹುಗುಣ ಅವರು ಚಿಪ್ಪಿಕೋ ಚಳುವಳಿ ಪ್ರಾರಂಭಿಸಿದ್ದರು. ಅದೇ ರೀತಿ ಅವರ ನೇತೃತ್ವದಲ್ಲಿ ನಾವು ಸಹ 35 ವರ್ಷಗಳ ಹಿಂದೆಯೇ ಅವರನ್ನು ಕರೆಯಿಸಿ ಮಲೆನಾಡ ಭಾಗದಲ್ಲಿ ಅಪ್ಪಿಕೋ ಚಳುವಳಿ ಪ್ರಾರಂಭಿಸಿದ್ದೇವೆ. ಇದರ ಉದ್ದೇಶ ಹಸಿರು ಮರ ಕಡಿಯಬಾರದು ಎಂಬುದು. ಅಂದಿನಿಂದಲೂ ಸಹ್ಯಾದ್ರಿ ಆಚರಣೆ ನಡೆಯುತ್ತಿದೆ. ಘಟ್ಟಗಳ ಉಳಿವು ಕೇವಲ ಮಲೆನಾಡಿಗರಿಗೆ ಮಾತ್ರ ಸಂಬಂಧಿಸಿದ್ದಲ್ಲ, ತುಂಗಾಭದ್ರ ಜಲಾಶಯ ಶೀಘ್ರದಲ್ಲಿ ತುಂಬುತ್ತವೆ ಎನ್ನಲಾಗುತ್ತಿದೆ.
ಅದಕ್ಕೆ ಕಾರಣ ತುಂಗಾ ಮತ್ತು ಭದ್ರ ಹುಟ್ಟುವ ನದಿಮೂಲ ಪಾತ್ರದಲ್ಲಿ ಮರಗಳನ್ನು ಕಡಿಯಲಾಗಿದೆ. ಇದರಿಂದ ಮಣ್ಣು ಕುಸಿದು ಜಲಾಶಯದಲ್ಲಿ ಹೂಳು ತುಂಬಿದೆ. ಜಲಾಶಯದಲ್ಲಿ ನೀರಿಗಿಂತ ಮಣ್ಣೇ ಹೆಚ್ಚಾಗಿದೆ. ಬೆಟ್ಟಶ್ರೇಣಿಗಳಲ್ಲಿ ಶೇ. 66 ರಷ್ಟು ಅರಣ್ಯವಿರಬೇಕು. ಬಯಲುಸೀಮೆಯಲ್ಲಿ ಶೇ. 36 ರಷ್ಟಿರಬೇಕು. ಆದರೆ ಈಗ ಶೇ. 35 ರಷ್ಟು ಮಾತ್ರ ಅರಣ್ಯವಿದೆ. ಸಾಗುವಾನಿಯಂತಹ ಮರಗಳನ್ನು ಬೆಳೆಸುವ ಅವಶ್ಯಕತೆ ಇಲ್ಲ. ನಿಸರ್ಗದತ್ತವಾದಂತಹ ಮರಗಳನ್ನು ಬೆಳೆಸಬೇಕು. ಮಳೆ, ಗಾಳಿ, ನೀರು ಕೊಡುವಂತ, ಜೇನುಸಾಕಾಣಿಕೆಗೆ ಅನುಕೂಲವಾಗುವಂತ ಮರಗಳನ್ನು ಬೆಳೆಸುವ ಅಗತ್ಯತೆ ಇದೆ ಎಂದರು.
ಈ ಸಂದರ್ಭದಲ್ಲಿ ಡಿಎಫ್ಓ ಎನ್,ಬಿ.ಮಂಜುನಾಥ್, ಕೆ.ಬಿ.ರೂಪಾನಾಯ್ಕ್, ಜಿ.ಎಲ್.ಜನಾರ್ದನ್, ಪ್ರಾಂಶುಪಾಲ ದಾದಾಪೀರ್ ನವಿಲೆಹಾಳ್, ಮಂಜುನಾಥ್ ಇದ್ದರು.

Leave a Comment