ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಜೆಸಿಎಂ ಚಾಲನೆ

ತುಮಕೂರು, ಜ. ೧೯- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಇಂದಿನಿಂದ ಹಮ್ಮಿಕೊಂಡಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.

ನಗರದ ಶೆಟ್ಟಿಹಳ್ಳಿ ಮುಖ್ಯ ರಸ್ತೆಯಲ್ಲಿರುವ ನಳಂದ ಶಾಲೆ ಆವರಣದಲ್ಲಿ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಸಚಿವ ಮಾಧುಸ್ವಾಮಿ ಅವರು, ಕರ್ನಾಟಕದಲ್ಲಿ 1998 ರಿಂದೀಚೆಗೆ ಮಕ್ಕಳನ್ನು ಪೋಲಿಯೋ ಮುಕ್ತ ಮಾಡಲಾಗುತ್ತಿದೆ. ಪೋಲಿಯೋ ನಿರ್ಮೂಲನೆಗೆ ಸರ್ಕಾರದ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪೋಷಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ದೇಶದಲ್ಲಿ 2011 ರಿಂದ ಯಾವುದೇ ಹೊಸ ಪೋಲಿಯೋ ಪ್ರಕರಣ ಕಂಡು ಬಂದಿಲ್ಲ. ಭಾರತ ಈಗ ವಿಶ್ವ ಆರೋಗ್ಯ ಸಂಸ್ಥೆ ವತಿಯಿಂದ ಪೋಲಿಯೋ ಮುಕ್ತ ರಾಷ್ಟ್ರ ಎಂಬ ನಿರ್ಮೂಲನೆ ಪ್ರಮಾಣ ಪತ್ರವನ್ನು ಪಡೆದಿದೆ. ಆದರೆ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ದೇಶಗಳಲ್ಲಿ ಈ ಪೋಲಿಯೋ ಇನ್ನೂ ನಿರ್ಮೂಲನೆಯಾಗಿಲ್ಲ ಎಂದರು.

ಪೋಲಿಯೋ ಜತೆಗೆ ಪ್ಲೇಗ್, ಸಿಡಿಬನ್ನು ಮುಕ್ತ ಮಾಡಿರುವ ರಾಜ್ಯಗಳಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.

ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಅವರು ಸಲಹೆ ನೀಡಿದರು.

ಶಾಸಕ ಜ್ಯೋತಿಗಣೇಶ್ ಮಾತನಾಡಿ, ಸುಮಾರು 70ರ ದಶಕದಲ್ಲಿ ಪೋಲಿಯೋ ನಿರ್ಮೂಲನೆ ಮಾಡಲು ಭಾರತ ಸರ್ಕಾರ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಈ ಕಾರ್ಯಕ್ರಮ ಇಂದು ಶೇ. 100 ರಷ್ಟು ಪ್ರಗತಿ ಸಾಧಿಸಿದೆ ಎಂದರು.

ತಾಯಂದಿರು ಸಹ ಮಕ್ಕಳಿಗೆ ಕಾಲ ಕಾಲಕ್ಕೆ ಸರಿಯಾಗಿ ಹಾಕಿಸಬೇಕಾಗಿರುವ ಲಸಿಕೆಗಳನ್ನು ತಪ್ಪದೇ ಹಾಕಿಸಬೇಕು ಎಂದು ಅವರು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಿ.ಹೆಚ್.ಓ. ಮಾತನಾಡಿ, ಜಿಲ್ಲೆಯಾದ್ಯಂತ 5 ವರ್ಷದೊಳಗಿನ ಒಟ್ಟು 2 ಲಕ್ಷ ಮಕ್ಕಳಿಗೆ ಲಸಿಗೆ ನೀಡುವ ಗುರಿ ಹೊಂದಲಾಗಿದೆ. 1220 ಲಸಿಕಾ ಕೇಂದ್ರಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಟೋಲ್‌ಗಳಲ್ಲಿ 62 ಟ್ರಾನ್ಸಿಟ್ ಕೇಂದ್ರಗಳನ್ನು ತೆರೆದಿದ್ದು, ಮಕ್ಕಳಿಗೆ ಪೋಲಿಯೋ ಲಸಿಕಾ ಹಾಕಲಾಗುತ್ತಿದೆ ಎಂದರು.

ಈ ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 5038 ಸಿಬ್ಬಂದಿ, 261 ಮೇಲ್ಪಿಚಾರಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ವಿಶೇಷವಾಗಿ ವಲಸೆ ಬಂದಿರುವ ಸಮುದಾಯ, ಲಸಿಕಾ ವಂಚಿತ ಪ್ರದೇಶ, ಕೊಳಚೆ ಪ್ರದೇಶ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಆದ್ಯತೆ ಮೇರೆಗೆ ಪೋಲಿಯೋ ಹನಿ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಪೋಷಕರು ಮಕ್ಕಳಿಗೆ 2 ಹನಿ ಲಸಿಕೆ ಹಾಕಿರುವ ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿ.ಪಂ. ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ, ಜಿ.ಪಂ. ಸಿಇಓ ಶುಭಕಲ್ಯಾಣ್, ಡಾ. ಕೇಶವರಾಜ್ ಮತ್ತಿತರರು ಉಪಸ್ಥಿತರಿದ್ದರು.

Leave a Comment