ಪಲಪುಷ್ಪ ಪ್ರದರ್ಶನಲ್ಲಿ ಮೇಳೈಸಿದ ಶ್ರೀರಂಗಪಟ್ಟಣ

ಮಂಡ್ಯ: ಜ.27- ಶ್ರೀರಂಗಪಟ್ಟಣದ ಶ್ರೀರಂಗನಾಥ, ಅರಮನೆ ದರ್ಬಾರ್, ತಪಸ್ಸಿಗೆ ಕುಳಿತ ಶಿವ, ತಾಯಿ ಮಗುವಿನ ಕಲಾಕೃತಿ, ಯೋಗ ನರಸಿಂಸ್ವಾಮಿ, ಕೆ.ಆರ್.ಎಸ್. ಚಂದ್ರಯಾನ ಮಾದರಿ, ಪುಷ್ಪರಾಶಿ ಇವು ನಗರದಲ್ಲಿ ಏಳು ದಿನಗಳ ಕಾಲ ನಡೆಯಲಿರುವ ಪಲಪುಷ್ಪ ಪ್ರದರ್ಶನದಲ್ಲಿ ಕಂಡುಬಂದ ಕಲಾಕೃತಿಗಳು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ಪಲಪುಷ್ಪ ಪ್ರದರ್ಶನಲ್ಲಿ ಹಲವು ವಿಶೇಷತೆಯನ್ನು ಕಾಣಬಹುದು.
ಶ್ರೀರಂಗನಾಥಸ್ವಾಮಿ ಹೈಲೆಟ್:
ಈ ಬಾರಿಯ ಪ್ರದರ್ಶನದಲ್ಲಿ ಜನರನ್ನು ಹೆಚ್ಚು ಆಕರ್ಷಿಸುತ್ತಿರುವುದು ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿಯ ಮಾದರಿ. ಪಾಂಡವಪುರ ತಾಲೂಕು ಡಿಂಕಾ ಶೆಟ್ಟಿಹಳ್ಳಿ ಗ್ರಾಮದವರೂ ಆದ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಭಿಲಾಷ್ ನೇತೃತ್ವದ ತಂಡ ಮಾದರಿಯನ್ನು ನಿರ್ಮಿಸಿದೆ. ಥರ್ಮಕೋಲ್, ಬಟ್ಟೆ ಬಳಸಿ ಇದನ್ನು ಮಾಡಲಾಗಿದೆ.
ಕಾವೇರಿ ವನದಲ್ಲಿ ಹಸಿರು ಗಿಡಗಳ ಮಧ್ಯೆ ನಿರ್ಮಿಸಿರುವ ಬೃಹದಾಕಾರದ ಮಾದರಿ, ಪಲಪುಷ್ಪ ಪ್ರದರ್ಶನದಲ್ಲಿ ಹೈಲೆಟ್ ಆಗಿದೆ. ಮೊದಲ ಬಾರಿ ನೋಡುವವರಿಗೆ ನಿಜವಾಗಿರುವಂತೆ ಭಾಸವಾಗುತ್ತದೆ. ಇನ್ನು ಪ್ರದರ್ಶನಕ್ಕೆ ಬಂದವರು ಇದರ ಎದುರು ನಿಂತು ಪೋಟೋ ಕ್ಲಿಕ್ಕಿಸಿಕೊಳ್ಳುವುದನ್ನು ಮರೆಯುತ್ತಿಲ್ಲ. ಮಾದರಿ ಬಗ್ಗೆ ಮಾತನಾಡಿದ ಅಭಿಲಾಷ್, ತುಂಬಾ ಇಷ್ಟಪಟ್ಟು ಮಾದರಿ ನಿರ್ಮಿಸಿದ್ದೇವೆ. ಜನರು ಇದನ್ನು ಕಂಡು ಖುಷಿಪಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ.
ಇದಲ್ಲದೆ, ಜಯಚಾಮರಾಜೇಂದ್ರ ಒಡೆಯರ್ ಅವರ ದರ್ಬಾರ್ ಮಾದರಿ, ಶಿವ ತಪಸ್ಸಿಗೆ ಕುಳಿತ ಮಾದರಿ, ತಾಯಿ ಮಗುವಿನ ಕಲಾಕೃತಿ, ಯೋಗ ನರಸಿಂಹಸ್ವಾಮಿಯ ಮರಳು ಕಲಾಕೃತಿ, ಚಂದ್ರಯಾನ ಮಾದರಿ, ಕೆಆರ್‍ಎಸ್ ಮಾದರಿಗಳು ನೋಡುಗರಿಗೆ ಹೊಸತನ ಮೂಡಿಸುತ್ತಿದೆ. ಇದಲ್ಲದೆ, ಗ್ರಾಮೀಣ ಭಾಗದ ಸಂಕ್ರಾಂತಿ ಸಂಭ್ರಮ, ಮಹಾತ್ಮ ಗಾಂಧೀಜಿ ಅವರ ನೂಲು ನೇಯುತ್ತಿರುವುದು, ಐದು ತಲೆಯ ಹಾವಿನ ಮಾದರಿ ಸೇರಿದಂತೆ ಹಲವು ಕಲಾಕೃತಿಗಳು ಗಮನಸೆಳೆಯುತ್ತಿವೆ.
ತರಕಾರಿಯಲ್ಲಿ ಗಣ್ಯರ ಚಿತ್ರ:
ಇನ್ನು ಹಲವು ತರಕಾರಿಗಳಲ್ಲಿ ವಿಶೇಷ ಕೆತ್ತನೆ ಮಾಡಲಾಗಿದೆ. ಈ ಪೈಕಿ ಗಣ್ಯರಾದ ಮಹಾತ್ಮಗಾಂಧಿಜಿ, ಡಾ.ಬಿ.ಆರ್.ಅಂಬೇಡ್ಕರ್, ನರೇಂದ್ರ ಮೋದಿ, ಡಾ.ರಾಜ್‍ಕುಮಾರ್, ಡಾ.ಶಿವಕುಮಾರಸ್ವಾಮೀಜಿ, ಡಾ.ಬಾಲಗಂಗಾಧರನಾಥ ಸ್ವಾಮೀಜಿ, ಪೇಜಾವರ ಶ್ರೀಗಳು, ಅಂಬರೀಷ್, ದರ್ಶನ್, ಯಶ್ ಅವರ ಮುಖವನ್ನು ಹೋಲುವ ಮಾದರಿ ಆಕರ್ಷಕವಾಗಿದೆ.
ಇದಲ್ಲದೆ, ಜಿಲ್ಲೆಯ ಪ್ರವಾಸಿತಾಣದ ಬಗ್ಗೆಯೂ ಸಾರ್ವಜನಿಕರಿಗೆ ತಿಳಿಸುವ ಉದ್ದೇಶದೊಂದಿಗೆ ಪ್ರವಾಸಿತಾಣದ ಮಾದರಿಯನ್ನು ಮಾಡಲಾಗಿದೆ. ರಂಗನತಿಟ್ಟು, ಶಿವಪುರ ಸತ್ಯಾಗ್ರಹ ಸೌಧ, ಗಗನಚುಕ್ಕಿ, ಕೆಆರ್‍ಎಸ್ ಹೀಗೆ ಹಲವು ಮಾದರಿಗಳಿವೆ. ಇನ್ನು ಪ್ರವಾಸಿಗರು ಪೋಟೋ ಕ್ಲಿಕ್ಕಿಸಿಕೊಳ್ಳಲು ಅನುಕೂಲವಾಗುವಂತೆ ಒಂದಷ್ಟು ಕಡೆ ಹೂವಿನಲ್ಲಿ ಪೋರೀಮ್‍ಗಳನ್ನು ಮಾಡಲಾಗಿದೆ.
ಇನ್ನು ಪಲಪುಷ್ಪ ಪ್ರದರ್ಶನಕ್ಕೆ ಬಂದವರಿಗೆ ಬಾಯಿ ಚಪ್ಪರಿಸಲು ವಿಭಿನ್ನ ಬಗೆಯ ತಿಂಡಿಗಳು ಲಭ್ಯವಿದೆ. ವಿವಿಧೆಡೆಯಿಂದ ಆಗಮಿಸಿರುವ ಮಾರಾಟಗಾರರು ಹಲವು ತಿಂಡಿಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದಾರೆ.
ರೈತರಿಗೆ ಸಿಗಲಿದೆ ಮಾಹಿತಿ:
ಪಲಪುಷ್ಪ ಪ್ರದರ್ಶನದಲ್ಲಿ ರೈತರಿಗೆ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಇಲಾಖಾವಾರು ಮಳಿಗೆ ಸ್ಥಾಪಿಸಲಾಗಿದೆ. ಅದರಲ್ಲಿಯೂ ಪ್ರಮುಖವಾಗಿ ರೈತರನ್ನೇ ಕೇಂದ್ರವನ್ನಾಗಿಟ್ಟುಕೊಂಡು ಮೀನುಗಾರಿಕೆ, ತೋಟಗಾರಿಕೆ, ಕೃಷಿ, ಪಶುಪಾಲನಾ ಇಲಾಖೆ ಮತ್ತು ವಿ.ಸಿ ಪರಂ ಕೃಷಿ ಸಂಶೋಧನಾ ಕೇಂದ್ರದಿಂದ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಿದ್ದು, ರೈತರು ಕೃಷಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ಪಡೆಯಬಹುದು. ಜತೆಗೆ ಸಾವಯವ ಮಾರುಕಟ್ಟೆಯೂ ಇದ್ದು, ತರಕಾರಿ ಮತ್ತು ಹಣ್ಣುಗಳ ಮಾರಾಟ ನಡೆಯುತ್ತಿದೆ.
ಒಟ್ಟಾರೆ, ಜಿಲ್ಲಾಡಳಿತ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಶ್ರಮದಿಂದ ಪಲಪುಷ್ಪ ಪ್ರದರ್ಶನ ಉತ್ತಮವಾಗಿ ಮೂಡಿಬಂದಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Leave a Comment