ಪರೀಕ್ಷೆ ಪ್ರವೇಶ ಪತ್ರ ನಿರಾಕರಣೆ ನೊಂದ ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು, ಫೆ. ೧೨- ಕಡಿಮೆ ಹಾಜರಾತಿಯಿಂದ ಪರೀಕ್ಷೆಯ ಪ್ರವೇಶ ಪತ್ರ ಕೊಡಲು ಸಾಧ್ಯವಿಲ್ಲ ಎಂದು ಶಾಲೆಯವರು ಹೇಳಿದ್ದರಿಂದ ನೊಂದ 10ನೇ ತರಗತಿ ವಿದ್ಯಾರ್ಥಿ ತಿಗಣೆ ಔಷಧಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೈಯ್ಯಪ್ಪನಹಳ್ಳಿಯ ನಾಗವಾರಪಾಳ್ಯದಲ್ಲಿ ನಡೆದಿದೆ.
ನಾಗವಾರಪಾಳ್ಯದ ಎಲ್ಲಮ್ಮ ದೇವಸ್ಥಾನ ಸ್ಟ್ರೀಟ್‌ನ ಜನಾರ್ಧನ (15) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯಾಗಿದ್ದಾನೆ. ಸ್ಥಳೀಯ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಜನಾರ್ಧನ ಸರಿಯಾಗಿ ಶಾಲೆಗೆ ಹೋಗದೆ ಗೈರು ಹಾಜರಾಗಿದ್ದನು.
ಹಾಜರಾತಿ ಕಡಿಮೆ ಇದ್ದಿದ್ದರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಪ್ರವೇಶ ಪತ್ರ ಕೊಡಲು ಸಾಧ್ಯವಿಲ್ಲ ಎಂದು ಶಿಕ್ಷಕರು, ವಿದ್ಯಾರ್ಥಿಗೆ ಹೇಳಿ ಆತನ ತಾಯಿ ಶ್ರೀದೇವಿಯವರನ್ನು ಕರೆಸಿ, ವಾಸ್ತವ ಸಂಗತಿಯನ್ನು ತಿಳಿಸಿ ಕಳುಹಿಸಿದ್ದರು.
ಜನಾರ್ಧನನಿಗೆ ತಾಯಿ ಕೂಡ ಸರಿಯಾಗಿ ಶಾಲೆಗೆ ಹೋಗದಿದ್ದರಿಂದ ನಿನಗೆ ಈ ಗತಿ ಬಂದಿದೆ ಎಂದು, ಮುಂದಿನ ದಿನಗಳಲ್ಲಿ ಶಾಲೆಗೆ ಸರಿಯಾಗಿ ಹೋಗಿ ಓದುವಂತೆ ಬುದ್ಧಿವಾದ ಹೇಳಿದ್ದರು.
ಇದರಿಂದ ನೊಂದ ಜನಾರ್ಧನ ಕಳೆದ ಫೆ. 6 ರಂದು ಟ್ಯೂಷನ್‌ಗೆ ಹೋಗುವುದಾಗಿ ಹೇಳಿಹೋಗಿ ತಿಗಣೆ ಔಷಧಿ ಕುಡಿದು, ವಾಂತಿ ಮಾಡಿಕೊಂಡು ಅಸ್ವಸ್ಥನಾಗಿದ್ದಾನೆ. ಕೂಡಲೇ ಆತನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟಿದ್ದಾನೆ.
ಪ್ರಕರಣ ದಾಖಲಿಸಿರುವ ಬೈಯಪ್ಪನಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಅಪಘಾತ – ಗಾಯ
ವಿಕಾಸಸೌಧದ ಬಳಿ ಕಳೆದ ಡಿ. 6 ರಂದು ಸಂಜೆ 4.30ರ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ವೃದ್ಧರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಸುಮಾರು 70 ವರ್ಷ ವಯಸ್ಸಿನ ವೃದ್ಧರನ್ನು ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿರುವ ಅವರ ವಾರಸುದಾರರು ಪತ್ತೆಯಾಗಿಲ್ಲ. ಬಲಗೈನ ಕಿರುಬೆರಳು ಇರುವುದಿಲ್ಲ, ಇವರ ವಾರಸುದಾರರು, ಕಬ್ಬನ್ ಪಾರ್ಕ್ ಸಂಚಾರ ಪೊಲೀಸರ ದೂ. 22942912 ಸಂಖ್ಯೆಯನ್ನು ಸಂಪರ್ಕಿಸಬಹುದು.

Leave a Comment