ಪರೀಕ್ಷಾ ಪೇ ಚೆರ್ಚಾ ವಿದ್ಯಾರ್ಥಿಗಳಿಗೆ ಪ್ರೇರಣೆ: ಸುರೇಶ್ ಕುಮಾರ್

ಬೆಂಗಳೂರು,ಜ.20 – ಪ್ರಧಾನಿ ನರೇಂದ್ರಮೋದಿ ಅವರು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಕುರಿತ ಆತಂಕ ನಿವಾರಿಸಿ ಪರೀಕ್ಷೆಯನ್ನು ಖುಷಿಯಿಂದ ಎದುರಿಸುವ ಕುರಿತು ನೀಡಿರುವ ಸಲಹೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ  ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ರಾಜಾಜಿನಗರದ ಕೆಎಲ್ ಇ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಿವಿಧ ಶಾಲೆಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ ಎದುರಿಸುವ ಕುರಿತಂತೆ ಚರ್ಚೆ ನಡೆಸಿ ಅವರ ಸವಾಲುಗಳಿಗೆ ಉತ್ತರಿಸುವ ಪ್ರಯತ್ನ ವಿಶ್ವದ ಯಾವುದೇ ಪ್ರಧಾನ ಮಂತ್ರಿ ಮಾಡಿರಲಾರರು. ನರೇಂದ್ರಮೋದಿ ಅವರು   (ಎಕ್ಸಾಮಿನೇಷನ್ ವಾರಿಯರ್) examination warriorಪುಸ್ತಕದ ಕನ್ನಡ ರೂಪಾಂತರವನ್ನು ಎಲ್ಲಾ ಶಾಲೆಗಳಿಗೆ ತಲುಪಿಸುವಲ್ಲಿ ಅಗತ್ಯ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಧಾನಿಯವರ ವಿದ್ಯಾರ್ಥಿ‌ಪರವಾದ ಕಾಳಜಿಯನ್ನು ಎಲ್ಲ ವಿದ್ಯಾರ್ಥಿಗಳು ಅರ್ಥೈಸಿಕೊಂಡು ಶಾಂತಚಿತ್ತತೆಯಿಂದ, ಪರೀಕ್ಷೆಯನ್ನು ಸಮರ್ಥವಾಗಿ‌ ಎದುರಿಸಬೇಕೆಂದು ಕಿವಿ ಮಾತು ಹೇಳಿದರು.

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಇನ್ನು ಕೇವಲ 66 ದಿನಗಳಿದ್ದು, ಅಧ್ಯಯನಕ್ಕಾಗಿ ದೈನಂದಿನ ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಓದಿನಲ್ಲಿ ತೊಡಗಬೇಕು. ಜತೆಗೆ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಕಡೆಯೂ ಕಾಳಜಿ ವಹಿಸಬೇಕು ಎಂದು ಸುರೇಶ್ ಕುಮಾರ್ ಸಲಹೆ ಮಾಡಿದರು.

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಪಟ್ಟಂತೆ ಶಿಕ್ಷಣ ಇಲಾಖೆಯಿಂದ ಸಂವೇದನಾ ಎಂಬ ನೇರ ಫೋನ್ ಇನ್ ಕಾರ್ಯಕ್ರಮ ಆಯೋಜಿಸಿದ್ದು, ಈ ತಿಂಗಳ 28 ರಂದು ಫೋನ್ ಇನ್ ಕಾರ್ಯಕ್ರಮ ನಡೆಯಲಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳಬಹುದು. ಈ ಕಾರ್ಯಕ್ರಮ ಫೇಸ್ ಬುಕ್ ನಲ್ಲೂ ನೇರ ಪ್ರಸಾರ ಮಾಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ‌  ಕಾರ್ಯಕ್ರಮದ ಮುನ್ನ ಹಾಜರಿದ್ದ ವಿದ್ಯಾರ್ಥಿಗಳೊಂದಿಗೆ ‌ಪರೀಕ್ಷೆ‌ ಸಿದ್ಧತೆ ಕುರಿತಂತೆ ಸಂವಾದ ನಡೆಸಿದ ಸಚಿವರು ಕಾರ್ಯಕ್ರಮದ ಬಳಿಕ ನರೇಂದ್ರ ಮೋದಿಯವರ ಉತ್ತರಗಳನ್ನು ವಿದ್ಯಾರ್ಥಿಗಳಿಗೆ ವಿವರವಾಗಿ ವಿವರಿಸಿದರು.

ಈ ಸಂದರ್ಭದಲ್ಲಿ  ಶಿಕ್ಷಣ ಇಲಾಖೆಯ ಆಯುಕ್ತ ಜಗದೀಶ್, ಸಮಗ್ರ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಎಂ ಟಿ ರೇಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Comment