ಪರಿಹಾರಕ್ಕಾಗಿ ಕಾರ್ಮಿಕರ ಮನವಿ

ದಾವಣಗೆರೆ, ಜು. 17 – ಕಾರ್ಮಿಕರಿಗೆ ಕಿರುಕುಳ ನೀಡಲಾಗುತ್ತಿದೆ ಆದ್ದರಿಂದ ಕೆಲಸದಿಂದ ನಿವೃತ್ತಿ ಪಡೆಯುತ್ತಿದ್ದೇವೆ ನಮಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ದಾವಣಗೆರೆಯ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಶ್ರೀಗಣೇಶರ್ ಟೆಕ್ಸ್ ಟೈಲ್ ಮಿಲ್ ಲಿ. ಮುಂಭಾಗದಲ್ಲಿ ಸುಮಾರು 113 ಮಂದಿ ಕಾರ್ಮಿಕರು ಪ್ರತಿಭಟನೆ ನಡೆಸಿ ನಂತರ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

2015 ರಲ್ಲಿ ಮಿಲ್ ಸ್ಥಳಾಂತರಗೊಂಡಿತ್ತು. ಈ ವೇಳೆ ಕಾರ್ಮಿಕರಿಗೆ ಕೆಲಸಕ್ಕೆ ಹೋಗಲು ವಾಹನದ ಸೌಲಭ್ಯ ಒದಗಿಸಿಲ್ಲ. ಅಲ್ಲದೆ ಕೆಲಸಕ್ಕೆ ಸ್ಥಳಾಂತರ ಮಾಡಿದ ಸಂದರ್ಭದಲ್ಲಿ ಸುಮಾರು 275 ಜನ ಕಾರ್ಮಿಕರಿದ್ದು ಅವರಿಗೆ ಆಡಳಿತ ಮಂಡಳಿ ಸ್ಥಳಾಂತರ ಪೂರ್ವದಲ್ಲಿ ಹೇಳಿದಂತೆ ನಡೆದುಕೊಳ್ಳದೆ ಕಿರುಕುಳ ನೀಡುತ್ತಿದ್ದಾರೆ. ಈಗಾಗಲೇ ಶೇ. 50 ರಷ್ಟು ಕಾರ್ಮಿಕರು ರಾಜೀನಾಮೆ ನೀಡಿ ಬಲವಂತದಿಂದ ಹೊರಹೋಗಿದ್ದಾರೆ. ಇನ್ನು ಕೆಲವು ಕಾರ್ಮಿಕರು ಮನನೊಂದು ಕಿರುಕುಳದಿಂದ ಬೇಸತ್ತು ಕೆಲಸಕ್ಕೆ ಗೈರು ಹಾಜರಾಗಿದ್ದಾರೆ. ಆದ್ದರಿಂದ ರಾಜೀನಾಮೆ ನೀಡುವ ಕಾರ್ಮಿಕರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಕಾರ್ಮಿಕ ಇಲಾಖೆ ಆಯುಕ್ತರು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಯೋಗೇಂದ್ರ, ಪರಶುರಾಮ್, ದೇವೇಂದ್ರಪ್ಪ,ಶಿವಾನಂದ್,ಮಂಜುಳಾ, ರಾಜು, ನಾಗಪ್ಪ, ಚಂದ್ರಪ್ಪ, ಮುರಿಗೆಪ್ಪ, ಮೆಹಬೂಬ್, ಬಸವರಾಜ್,ಸುರೇಶ್, ರಾಮಚಂದ್ರಪ್ಪ ಸೇರಿದಂತೆ ಅನೇಕರು ಇದ್ದರು.

Leave a Comment