ಪರಿಸರ ಸ್ವಚ್ಚವಾಗಿಟ್ಟುಕೊಳ್ಳದಿದ್ದರೆ ಅಪಾಯ ಖಚಿತ

ಕೆ.ಆರ್.ಪೇಟೆ, ಆ.18- ಪರಿಸರವನ್ನು ನಾವು ಕಾಪಾಡಿಕೊಳ್ಳದಿದ್ದರೆ ವಾತಾವರಣದಲ್ಲಿ ಏರುಪೇರಾಗಿ ಮುಂದೊಂದು ದಿನ ದೊಡ್ಡ ಗಂಡಾತರಕ್ಕೆ ಸಿಲುಕಿಕೊಳ್ಳಬೇಕಾಗಿತ್ತದೆ ಎಂದು ಕೆ.ಆರ್.ಪೇಟೆ ನಗರದ ರಾಯಲ್ ಲೇಡೀಸ್ ಕ್ಲಬ್‍ನ ಅಧ್ಯಕ್ಷೆ ಲತಾಮುರಳಿಧರ್ ಆತಂಕ ವ್ಯಕ್ತ ಪಡಿಸಿದರು.
ಅವರ ತಾಲ್ಲೂಕಿನ ಮಾರ್ಗೋನಹಳ್ಳಿಯ ಶ್ರೀ ಮರಡಿಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ಲಬ್‍ನ ವತಿಯಿಂದ ಆಯೋಜಿಸಲಾಗಿದ್ದ ಪರಿಸರ ಜಾಗೃತಿ ಹಾಗೂ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳದಿದ್ದರೆ ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ರೋಗ ಬರುವುದಕ್ಕಿಂತ ಮುಂಚೆ ರೋಗ ಬರುವುದನ್ನು ತಡೆಗಟ್ಟುವುದು ಬಹಳ ಮುಖ್ಯ. ಮನುಷ್ಯ ಒಂದಲ್ಲ ಒಂದು ಕಾರಣಕ್ಕಾಗಿ ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಆದರೆ ಅದರಿಂದ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಆಲೋಚನೆ ಮಾಡುತ್ತಿಲ್ಲ. ಇದರ ಪರಿಣಾಮವಾಗಿ ಕಾಲ ಕಾಲಕ್ಕೆ ಮಳೆಯಾಗದೆ ಅನಾವೃಷ್ಠಿ ಉಂಟಾಗುತ್ತಿದೆ. ಇನ್ನು ಮುಂದಾದರು ನಾವುಗಳು ಕೃಷಿ ಚಟುವಟಿಕೆಗೆ ಯೋಗ್ಯವಾಗಿರದ ಜಮೀನಿನಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರದ ಸಮತೋಲನಕ್ಕೆ ನಾಂದಿ ಹಾಡಬೇಕೆಂದು ಮನವಿ ಮಾಡಿದ ಅವರು ಅರಣ್ಯ ಇಲಾಖೆಯ ಸಹಕಾರದಿಂದ ವಸತಿ ಶಾಲೆಯ ಆವರಣದಲ್ಲಿ ಹಲವಾರು ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಕಾರ್ಯವನ್ನು ಲತಾ ಅವರು ಮುಕ್ತಕಂಠದಿಂದ ಶ್ಲಾಘಿಸಿದರು.
ವಸತಿ ಶಾಲೆಯ ಪ್ರಭಾರ ಪ್ರಾಂಶುಪಾಲೆ ಕೆ.ಎಸ್.ಲತಾ, ರಾಯಲ್ ಲೇಡೀಸ್ ಕ್ಲಬ್‍ನ ಪ್ರಧಾನ ಕಾರ್ಯದರ್ಶಿ ಅನಂತಲಕ್ಷ್ಮೀ, ಪದಾಧಿಕಾರಿಗಳಾದ ಭಾರತಿ, ಕಲ್ಪನಾ, ಮತ್ತೀಘಟ್ಟ ಲತಾ, ಶಿಕ್ಷಕರಾದ ಕೆ.ಎಸ್.ಚಂದ್ರು, ಹೆಚ್.ಮಹೇಶ್, ಎಂ.ಎಸ್.ಸುನೀಲ್‍ಕುಮಾರ್, ಕೆ.ಆರ್.ಬೇಬಿರೇಖಾ, ಶಿವರಾಮು, ಪುನೀತಾ, ಪ್ರಶಾಂತ್‍ಕುಮಾರ್, ಬೋಧಕೇತರ ವರ್ಗದವರಾದ ಗುರುಸ್ವಾಮಿ, ಸುಂದರಮ್ಮ ಮತ್ತಿತರರು ಇದ್ದರು.

Leave a Comment