ಪರಿಸರ ಸ್ನೇಹಿ ಗಣಪ ಪ್ರತಿಷ್ಟಾಪಿಸಿ

ದಾವಣಗೆರೆ, ಸೆ. 9 – ಪಿಓಪಿ ಗಣಪತಿ ಪ್ರತಿಷ್ಟಾಪನೆಯಿಂದ ಪರಿಸರಕ್ಕೆ ಹಾನಿ ಉಂಟಾಗುತ್ತದೆ. ಹಾಗಾಗಿ ಮಣ್ಣಿನ ಗಣಪತಿ ಸ್ಥಾಪಿಸಿ ಪರಿಸರ ಸಂರಕ್ಷಣೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ಕೆ ಮುಂದಾಗಬೇಕೆಂದು ಶಾಸಕ ಎಸ್.ಎ.ರವೀಂದ್ರನಾಥ್ ಸಲಹೆ ನೀಡಿದರು.
ನಗರದ ಎವಿಕೆ ಕಾಲೇಜು ರಸ್ತೆಯಲ್ಲಿರುವ ಜಿಲ್ಲಾ ಗುರುಭವನದಲ್ಲಿಂದು ಪರಿಸರ ಸಂರಕ್ಷಣೆ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಮಣ್ಣಿನ ಗಣಪತಿ ಸಂಘ ಕುಣ್ಣೂರು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ದಾವಣಗೆರೆಯಲ್ಲಿ ಪ್ರಥಮ ಬಾರಿಗೆ ಒಂದೇ ಸೂರಿನಡಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ವಿಗ್ರಹಗಳ ಮಾರಾಟ ಹಾಗೂ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಣ್ಣಿನ ಗಣಪತಿ ಪ್ರತಿಷ್ಟಾಪನೆ ಮಾಡುವುದರಿಂದ ಪರಿಸರ ಸಂರಕ್ಷಣೆಗೆ ಉತ್ತೇಜನ ನೀಡಿದಂತಾಗುತ್ತದೆ. ಈ ಹಿನ್ನಲೆಯಲ್ಲಿ ಪರಿಸರ ಸ್ನೇಹಿ ಗಣಪತಿಯನ್ನು ಪ್ರತಿಯೊಬ್ಬರು ಪ್ರತಿಷ್ಟಾಪಿಸಬೇಕು. ಈ ಹಿಂದೆ ದಾವಣಗೆರೆಯಲ್ಲಿ 10 ರಿಂದ 15 ರಷ್ಟು ಜನರು ಗಣೇಶನ ಪ್ರತಿಷ್ಟಾಪನೆ ಮಾಡುತ್ತಿದ್ದರು. ಆದರೆ ಇದೀಗ ಎಲ್ಲಾ ಕಡೆಯೂ ಗಣೇಶನ ಪ್ರತಿಷ್ಟಾಪನೆ ಮಾಡುತ್ತಿರುವುದು ಸ್ವಾಗತರ್ಹ. ಪಿಓಪಿ ಗಣಪತಿಗಳು ಪರಿಸರಕ್ಕೆ ಹಾನಿ ಉಂಟು ಮಾಡುತ್ತವೆ. ಮಣ್ಣಿನ ಗಣಪತಿಗಳು ಪರಿಸರ ಸ್ನೇಹಿಗಳಾಗಿರುತ್ತವೆ. ಇದರಿಂದ ಪರಿಸರ ಮಾಲಿನ್ಯ ಸಹ ತಡೆಗಟ್ಟಬಹುದು ಎಂದು ಹೇಳಿದರು.
ಮೇಯರ್ ಶೋಭಾಪಲ್ಲಾಗಟ್ಟೆ ಮಾತನಾಡಿ, ಪಿಓಪಿ ಗಣಪತಿ ಬದಲು ಮಣ್ಣಿನ ಗಣಪತಿಯನ್ನೇ ಪ್ರತಿಷ್ಟಾಪನೆ ಮಾಡಿ ಮಣ್ಣಿನ ಮಕ್ಕಳಾಗಿ ಬಾಳಿ, ರಾಸಾಯನಿಕವಿರುವ ಯಾವುದೇ ವಸ್ತುಗಳನ್ನು ಬಳಸದಿರಿ. ಅವು ಪರಿಸರಕ್ಕೆ ಮಾರಕ. ಪ್ರಕೃತಿಯ ವಿರುದ್ದ ಹೋಗಬೇಡಿ. ಪ್ರಕೃತಿಯನ್ನು ಸಂರಕ್ಷಿಸುವ ಕೆಲಸ ಮಾಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ದೇವರಮನೆ ಶಿವಕುಮಾರ್, ಕರುನಾಡ ಕನ್ನಡ ಸೇನೆಯ ಅಧ್ಯಕ್ಷ ಗೋಪಾಲಗೌಡ್ರು, ಮಹಿಳಾ ಘಟಕದ ಅಧ್ಯಕ್ಷೆ ಹೆಚ್.ಸಿ.ಜಯಮ್ಮ, ಎಸ್,ಟಿ.ವೀರೇಶ್, ದೊಗ್ಗಳ್ಳಿ ಗೌಡ್ರು ಪುಟ್ಟರಾಜು, ಗುರುಸಿದ್ದಸ್ವಾಮಿ, ಗಿರೀಶ್ ಎಸ್.ದೇವರಮನಿ, ಎಂ.ಜಿ.ಶ್ರೀಕಾಂತ್ ಸೇರಿದಂತೆ ಮತ್ತಿತರರಿದ್ದರು.
 ಜೇಡಿ ಮಣ್ಣಿನ ಗಣಪ ಮಾರಾಟ
ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲ್ಲೂಕಿನ ಕುಣ್ಣೂರು ಗ್ರಾಮದಿಂದ ಪ್ರತಿವರ್ಷ ಜೇಡಿ ಮಣ್ಣಿನಿಂದ ಗಣೇಶನ ಮೂರ್ತಿಯನ್ನು ತಯಾರಿಸಲಾಗುತ್ತಿದೆ. ಒಂದು ಟ್ರ್ಯಾಕ್ಟರ್ ಲೋಡ್ ಗೆ ಒಂದು ಸಾವಿರ ರೂ ಜೇಡಿ ಮಣ್ಣನ್ನು ಖರೀದಿ ಮಾಡಲಾಗುತ್ತದೆ. ಸುಮಾರು 15 ವರ್ಷಗಳಿಂದ ತಯಾರು ಮಾಡುತ್ತಿದ್ದೇವೆ. 50 ಕುಟುಂಬಗಳು ಈ ಕೆಲಸದಲ್ಲಿ ತೊಡಗಿಕೊಂಡಿವೆ. ದಾವಣಗೆರೆ, ಹರಿಹರ, ರಾಣೇಬೆನ್ನೂರು, ಹುಬ್ಬಳ್ಳಿ, ಗದಗ,ಶಿಗ್ಗಾಂವ್, ಬಂಕಾಪುರ ಸೇರಿದಂತೆ ಮತ್ತಿತರೆಗಳಲ್ಲಿ ಮಾರಾಟ ಮಾಡುತ್ತಿದ್ದೇವೆ. ಕಾಯಿಪೇಟೆಯಲ್ಲಿ ಈಗಾಗಲೇ ನಮ್ಮವರು ಬಂದಿದ್ದಾರೆ. ಜೇಡಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣಪತಿ 150 ರಿಂದ 3500 ರೂಗಳಿಗೆ ದೊರೆಯುತ್ತದೆ.
ಚೌಡೇಶ್
ಗಣೇಶ ಮೂರ್ತಿ ತಯಾರಕ

Leave a Comment