ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

ದಾವಣಗೆರೆ, ಜೂ. 13 – ಪ್ರಸ್ತುತ ದಿನದಲ್ಲಿಂದು ನಾವು ಶುದ್ದವಾದ ಗಾಳಿ ಮತ್ತು ನೀರಿನಿಂದ ವಂಚಿತರಾಗಿದ್ದೇವೆ. ಪ್ರತಿಯೊಬ್ಬರು ಸಹ ಗಿಡ ನೆಡುವುದರ ಮೂಲಕ ಪರಿಸರವನ್ನು ಕಾಪಾಡಬೇಕಾಗಿದೆ ಎಂದು ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಂಬಾದಾಸ್ ಕುಲಕರ್ಣಿ ಹೇಳಿದರು,
ನಗರದ ಆರ್.ಎಲ್.ಕಾನೂನು ಕಾಲೇಜು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿಂದು ವಿದ್ಯಾರ್ಥಿಗಳ ಸಂಘ ಸಮಾರೋಪ ಸಮಾರಂಭ ಮತ್ತು ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಗಿಡಗಳನ್ನು ನೆಡುವುದು ಮತ್ತು ಪರಿಸರವನ್ನು ಸಂರಕ್ಷಿಸುವುದು ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿಯಲ್ಲ ಎಂಬ ಭಾವನೆ ಬೇಡ. ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಇಂದಿನ ಕಾನೂನು ವಿದ್ಯಾರ್ಥಿಗಳು ಮುಂದೆ ನ್ಯಾಯಾಧೀಶರಾಗಲಿದ್ದು, ಅವರ ಮುಂದೆ ಅನೇಕ ಜವಾಬ್ದಾರಿಗಳಿವೆ. ಸಮಸ್ಯೆಗಳಿಂದ ಹೊರಬರಬೇಕಾದರೆ ನಿರಂತರ ಅಧ್ಯಯನ ಅತ್ಯವಶ್ಯಕವಾಗಿದೆ. ವಕೀಲ ವೃತ್ತಿ ಶ್ರೇಷ್ಟವಾದ ವೃತ್ತಿಯಾಗಿದ್ದು, ಪ್ರತಿಯೊಬ್ಬರು ಸಹ ಪ್ರಾಮಾಣಿಕವಾಗಿ ಶ್ರದ್ದೆ, ನಂಬಿಕೆಯಿಂದ ವೃತ್ತಿಯನ್ನು ಮೈಗೂಡಿಸಿಕೊಂಡರೆ ಪರಿಪೂರ್ಣ ವ್ಯಕ್ತಿಗಳಾಗಿ ಹೊರಬರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿರಂತರ ಅಧ್ಯಯನವನ್ನು ಕೈಗೊಳ್ಳುವುದರ ಮೂಲಕ ಉತ್ತಮ ನ್ಯಾಯಾಧೀಶರಾಗಿ ಹೊರಬರಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಪ್ರಭು ಎನ್ ಬಡಿಗೇರ್ ಮಾತನಾಡಿ, ಸುಖವನ್ನು ಬದಿಗಿರಿಸಿ ತ್ಯಾಗ ಜೀವನದಿಂದ ಪರಿಶ್ರಮದಿಂದ ವ್ಯಕ್ತಿ ಉನ್ನತ ಮಟ್ಟಕ್ಕೆ ಬರಬಹುದು. ಪ್ರತಿಯೊಬ್ಬರ ಜೀವನದಲ್ಲಿ ಸಂಯಮ,ತಾಳ್ಮೆ, ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುವಂತಾಗಬೇಕು ಎಂದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಎಲ್.ಹೆಚ್.ಅರುಣ್ ಕುಮಾರ್ ಮಾತನಾಡಿ, ವಕೀಲರಿಗೆ ಸಮಾಜದಲ್ಲಿ ಹಕ್ಕುಗಳಿಂದ ವಂಚಿತರ, ಬಡವರ, ಶೋಷಿತರ ಪರವಾಗಿ ಹೋರಾಟ ಮಾಡಲು ಅವಕಾಶಗಳಿದ್ದು, ಆ ನಿಟ್ಟಿನಲ್ಲಿ ಸಮಾಜ ಮತ್ತು ದೇಶವನ್ನು ಸಮ ಸಮಾಜದಡಿಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾನೂನು ಕಾಲೇಜಿನ ಪ್ರಾಚಾರ್ಯರಾದ ಬಿ.ಎಸ್.ರೆಡ್ಡಿ ಮಾತನಾಡಿ, ಇಂದು ನಾವು ಕಾನೂನಿನ ಆಡಳಿತಕ್ಕೆ ಒಳಪಟ್ಟಿದ್ದು, ಪ್ರಜಾಪ್ರಭುತ್ವವನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದೇವೆ. ಸಮಾಜವನ್ನು ಅರ್ಥ ಮಾಡಿಕೊಂಡ ವ್ಯಕ್ತಿ ತನ್ನ ವೃತ್ತಿಯಲ್ಲೂ ಸಹ ಯಶಸ್ವಿಯಾಗಲು ಸಾಧ್ಯ ಎಂದು ತಿಳಿಸಿದರು. ಈ ವೇಳೆ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ವಿದ್ಯಾಧರ್, ಸೋಮಶೇಖರ್, ಬಿ.ಟಿ.ಬಸವನಗೌಡ, ಪಂಕಜಾ ಮುಂತಾದವರು ಉಪಸ್ಥಿತರಿದ್ದರು.

Leave a Comment