ಪರಿಸರದ ಸಂಪನ್ಮೂಲಗಳನ್ನು ಉಳಿಸಿ

ಚಿತ್ರದುರ್ಗ.ಆ.27; ಪರಿಸರದ ಸಂಪನ್ಮೂಲಗಳನ್ನು ರಕ್ಷಿಸುವುದು ನಮ್ಮ ಉದ್ದೇಶವಾಗಬೇಕು, ಉಳಿತಾಯದ ಭಾವನೆಗಳನ್ನು ಇಂದು ಹೆಚ್ಚಿಸಬೇಕಾಗಿದೆ, ನೈಸರ್ಗಿಕ ಸಂಪನ್ಮೂಲಗಳಾದ ಕಬ್ಬಿಣ, ಅದಿರು, ಮರಮುಟ್ಟುಗಳು, ಪೆಟ್ರೋಲು, ಡೀಸೆಲ್, ಬೆಳ್ಳಿ, ಬಂಗಾರಕ್ಕೆ ನಿಯಂತ್ರಣ ಹಾಕಿಕೊಂಡಾಗ ಮಾತ್ರ, ಪ್ರತಿಯೊಬ್ಬರೂ ಸುಖವಾಗಿ ಬದುಕಬಹುದು, ಇಲ್ಲದಿದ್ದರೆ ಸಂಪನ್ಮೂಲಗಳ ಕೊರತೆ ಉಂಟಾಗಿ, ಬದುಕು ದುಸ್ತರವಾಗುವುದು ಎಂದು ಪರಿಸರವಾದಿ ಡಾ. ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು.
ಅವರು ಬಾಪೂಜಿ ಬಾಲಕರ ಪ್ರೌಢಶಾಲೆ, ಸಿ.ಕೆ. ಪುರ, ಚಿತ್ರದುರ್ಗದಲ್ಲಿ ಪರಿಸರ ಉಳಿಸಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈಗಾಗಲೇ ನಾವು ಭೂಮಿಯಿಂದ ಸಾಕಷ್ಟು ಸಂಪನ್ಮೂಲಗಳನ್ನು ಖಾಲಿ ಮಾಡಿದ್ದೇವೆ, ಮುಂದಿನ ಜನಾಂಗಕ್ಕೆ ನಾವು ಉಳಿತಾಯದ ಮಂತ್ರವನ್ನು ಘೋಷಿಸಬೇಕು. ಪರಿಸರದಲ್ಲಿ ಸಿಗುವ ಸಂಪನ್ಮೂಲಗಳನ್ನು ಹೆಚ್ಚು ಹೆಚ್ಚು ಬಳಸುತ್ತಾ ಹೋದಷ್ಟು, ಪರಿಸರ ತನ್ನ ಅಸಮತೋಲನದಿಂದ, ದುಷ್ಪರಿಣಾಮಗಳನ್ನು ತೋರುತ್ತದೆ. ಗಣಿ ಕೈಗಾರಿಕೆ, ಅರಣ್ಯ ನಾಶ, ಅತಿಯಾದ ಕೃಷಿ ಚಟುವಟಿಕೆಗಳು, ಬಹುಮಹಡಿ ಕಟ್ಟಡಗಳು, ಸಂಚಾರ ವ್ಯವಸ್ಥೆಯಲ್ಲಿ ಅತಿಯಾದ ಒತ್ತಡ, ಜನಸಂಖ್ಯೆ ಹೆಚ್ಚಳ, ಅತಿಯಾದ ಕೈಗಾರಿಕೆಗಳಿಂದ, ವಾಯುಮಾಲಿನ್ಯ, ಜಲಮಾಲಿನ್ಯ, ಮಣ್ಣಿನ ಮಾಲಿನ್ಯ ಉಂಟಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದಷ್ಟು ಜನರು ಸರಳವಾಗಿ ಬದುಕಿ, ಜೀವನವನ್ನು ಸಮೃದ್ಧಗೊಳಿಸಿಕೊಳ್ಳಬೇಕಾಗಿದೆ. ಶಾಲಾ ಮಟ್ಟದಲ್ಲೇ ಮಕ್ಕಳಿಗೆ ಈ ಉಳಿತಾಯ ಎಂಬ ಪದವನ್ನು ಹೆಚ್ಚು ಹೆಚ್ಚು ಮನದಟ್ಟು ಮಾಡಿಕೊಡಬೇಕಾಗಿದೆ. ಈಗಲಂತೂ ಜನರಿಗೆ ಉಳಿತಾಯದ ಕಡೆ ಗಮನವಿಲ್ಲದೆ, ಹೆಚ್ಚು ದುಂದುಗಾರಿಕೆ, ಆಡಂಬರದ ಜೀವನದ ಕಡೆ ಹೆಜ್ಜೆ ಹಾಕುತ್ತಿದ್ದಾರೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಪೈಪೆÇೀಟಿ, ಅತಿಯಾದ ಉತ್ಪಾದನೆ, ಮಾಲಿನ್ಯಗಳು ಹೆಚ್ಚಾಗಿ, ಬದುಕು ದುಸ್ತರವಾಗಿದೆ ಎಂದರು.
ಪ್ರತಿಯೊಂದು ವಸ್ತು ಉತ್ಪಾದನೆಯಾದ ಮೇಲೆ, ಅದನ್ನು ಸರಿಯಾಗಿ ಬಳಕೆ ಮಾಡಿ, ಅದರ ತಯಾರಿಕೆಯನ್ನು ಸಾರ್ಥಕ ಗೊಳಿಸಬೇಕಾಗಿದೆ. ಹೆಚ್ಚು ಹೆಚ್ಚು ಉತ್ಪಾದನೆ ಮಾಡಿ ಬಳಸು ಮತ್ತು ಬಿಸಾಡು ಸಂಸ್ಕೃತಿ ಬಂದಾಗಿನಿಂದ, ಪರಿಸರದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಮಾಲಿನ್ಯವು ಸಹ ಮಿತಿ ಮೀರುತ್ತಿದೆ. ಬಳಸು ಮತ್ತು ಬಿಸಾಡು ಸಂಸ್ಕೃತಿಯಿಂದ ಈ ಭೂಮಿಯನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ಹೆಚ್ಚು ಉತ್ಪಾದನೆಯಾದ ವಸ್ತುಗಳನ್ನು ನಾವು ಕಸದಂತೆ ಬಳಸಿ ಬಿಸಾಡುತ್ತಿರುವುದರಿಂದ, ಮಾಲಿನ್ಯದ ಮಟ್ಟ ಹೆಚ್ಚಾಗುತ್ತಿದೆ. ನದಿಗಳಲ್ಲಿ, ಕೆರೆಗಳಲ್ಲಿ ನಾವು ಬಿಸಾಡಿದ ವಸ್ತುಗಳು ತೇಲಾಡುತ್ತಾ, ನಮ್ಮನ್ನು ಅಣಕಿಸುವಂತಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಸೈಯದ್ ಸಾದಿಕ್ ಉಪನ್ಯಾಸಕರಾದ ಬಿ.ಆರ್. ರಾಜಪ್ಪ, ಲಾವಣ್ಯ ರೆಡ್ಡಿ. ಜರೀನಾ ಭಾನು ದೈಹಿಕ ಶಿಕ್ಷಕರಾದ ಷಣ್ಮುಖ. ಬಿ. ಉಪಸ್ಥಿತರಿದ್ದರು.

Leave a Comment