ಪರಿಮಳ ಲಾಡ್ಜ್’ ವಿರುದ್ಧ ಫಿಲ್ಮ್ ಚೇಂಬರ್ ಗೆ ‘ನಮ್ಮ ಕರವೇ’ ದೂರು

ಬೆಂಗಳೂರು, ಸೆ 06 – ‘ನೀರ್ ದೋಸೆ’ ಖ್ಯಾತಿಯ ವಿಜಯಪ್ರಸಾದ್ ನಿರ್ದೇಶನದ ‘ಪರಿಮಳ ಲಾಡ್ಜ್’ ಚಿತ್ರ ಬಿಡುಗಡೆಗೂ ಮೊದಲೇ ಕೆಂಗಣ್ಣಿಗೆ ಗುರಿಯಾಗುತ್ತಿದೆ ಇದಕ್ಕೆ ಕಾರಣ ಟೀಸರ್ ನಲ್ಲಿರುವ ದ್ವಂದ್ವಾರ್ಥ ಸಂಭಾಷಣೆ ಈಗಾಗಲೇ ಹಿರಿಯ ಪತ್ರಕರ್ತ ರವಿ ಬೆಳಗೆರೆ “ಟೀಸರ್ ಹಿಂಪಡೆಯದಿದ್ದರೆ ದೂರು ಸಲ್ಲಿಸಬೇಕಾಗುತ್ತದೆ, ಚಿತ್ರ ಬಿಡುಗಡೆಯಾದರೆ ಜೈಲಿಗೆ ಕಳುಹಿಸುತ್ತೇನೆ” ಎಂದು ಎಚ್ಚರಿಸಿದ್ದರು ಇದೀಗ ಪರಿಮಳ ಲಾಡ್ಜ್ ಚಿತ್ರದ ವಿರುದ್ಧ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಫಿಲ್ಮ್ ಚೇಂಬರ್ ಗೆ ಲಿಖಿತ ದೂರು ನೀಡಿದೆ.
ಚಿತ್ರದಲ್ಲಿ ಬಳಸಿರುವ ಅಶ್ಲೀಲ ಸಂಭಾಷಣೆ ತೆಗೆಯುವಂತೆ ದೂರಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ. ಅಲ್ಲದೆ ಚಿತ್ರದ ಟೀಸರಿನಲ್ಲಿ ಇರುವ ಅಶ್ಲೀಲ ಸಂಭಾಷಣೆ ತೆಗೆಯದೇ ಇದಲ್ಲಿ ಫಿಲ್ಮಂ ಚೇಂಬರ್ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ಲೂಸ್ ಮಾದ, ನೀನಾಸಂ ಸತೀಶ್ ಹಾಗೂ ಸುಮನ್ ರಂಗನಾಥ್ ನಟನೆಯ ಪರಿಮಳ ಲಾಡ್ಜ್ ಎಂಬ ಹೆಸರಿನ ಈ ಚಿತ್ರದ ನಾಯಕ ನಟರ ಮೇಲೆ ಹಾಗೂ ನಿರ್ದೇಶಕ, ನಿರ್ಮಾಪಕ ಅವರ ಮೇಲೆ ಕ್ರಮ ಕೈಗೊಳ್ಳಲು ದೂರಿನಲ್ಲಿ ಒತ್ತಾಯಿಸಿದ್ದು, “ಅಶ್ಲೀಲ ಸಂಭಾಷಣೆ ತೆಗೆಸಬೇಕು ಇಲ್ಲವಾದರೆ ಕೋರ್ಟ್ ಮೊರೆ ಹೋಗಬೇಕಾಗುತ್ತದೆ. ಇದನ್ನು ಮೀರಿ ಚಿತ್ರ ಬಿಡುಗಡೆ ಮಾಡಿದ ಪಕ್ಷದಲ್ಲಿ ವಾಣಿಜ್ಯ ಮಂಡಳಿ ಮುಂದೆ ಹಾಗೂ ಈ ಚಲನಚಿತ್ರ ಪ್ರದರ್ಶನಗೊಳ್ಳುವ ಚಿತ್ರಮಂದಿರದ ಮುಂದೆ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ” ಎಂದು ದೂರಿನಲ್ಲಿ ಉಲ್ಲೇಖಿಸಿದೆ.
ಇತ್ತೀಚೆಗೆ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಈ ಚಿತ್ರದಲ್ಲಿ ನೀನಾಸಂ ಸತೀಶ್ ಹಾಗೂ ಲೂಸ್ ಮಾದ ಯೋಗಿ ಅವರಿಗೆ ಸಲಿಂಗಕಾಮಿಗಳು ಎಂಬ ಟೈಟಲ್ ನೀಡಲಾಗಿದೆ. ಅಲ್ಲದೇ ಚಿತ್ರದಲ್ಲಿ ನಟಿಸುತ್ತಿರುವ ಪ್ರತಿಯೊಬ್ಬರಿಗೂ ದ್ವಂದ್ವಾರ್ಥದ ಒಂದೊಂದು ವಿಶೇಷ ಟೈಟಲ್ ನೀಡಿದೆ. ಈ ಸಿನಿಮಾದಲ್ಲಿ ಸುಮನ್ ರಂಗನಾಥ್, ದತ್ತಣ್ಣ, ಬುಲೆಟ್ ಪ್ರಕಾಶ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ.

ದೂರು ಸ್ವೀಕರಿಸಿರುವ ಫಿಲ್ಮ್ ಛೇಂಬರ್ ಪರಿಮಳ ಲಾಡ್ಜ್’ ಚಿತ್ರ ತಂಡವನ್ನು ಕರೆಸಿ ಬುದ್ಧಿವಾದ ಹೇಳುವ ಮೂಲಕ ಅಶ್ಲೀಲ ಸಂಭಾಷಣೆ ಅಳಿಸಿಹಾಕುವ ಸಲಹೆ ನೀಡುತ್ತದೆಯೇ? ವಾಣಿಜ್ಯ ಮಂಡಳಿಯ ಸಲಹೆಯನ್ನು ಚಿತ್ರತಂಡ ಸ್ವೀಕರಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

Leave a Comment