ಪರಿಪೂರ್ಣ ವ್ಯಕ್ತಿಯಾಗಲು ಕಠಿಣ ಪರಿಶ್ರಮ ವಿದ್ಯಾಭ್ಯಾಸ ಅಗತ್ಯ

ಕೆ.ಆರ್.ಪೇಟೆ,ಸೆ.10- ವ್ಯಕ್ತಿಯೊಬ್ಬನ ಪರಿಪೂರ್ಣ ಬೆಳೆವಣಿಗೆಗೆ ಶಿಕ್ಷಣ ಅಗತ್ಯವಾಗಿದೆ. ಹಾಗಾಗಿ ಶ್ರದ್ಧಾ ಭಕ್ತಿಯಿಂದ ಹಾಗೂ ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡುವ ಮೂಲಕ ಪರಿಪೂರ್ಣ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಸದಸ್ಯ ಹೆಚ್.ಟಿ.ಮಂಜು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅವರು ಪಟ್ಟಣದ ಖಾಸಿಂಖಾನ್ ಸಮುದಾಯ ಭವನದಲ್ಲಿ ಬಂಡಿ ವಿದ್ಯಾಸಂಸ್ಥೆಯ ಕೃಷ್ಣರಾಜ ಪದವಿ ಪೂರ್ವ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದು ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿದ ದೇಶವು ಸಮಗ್ರ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಭಾರತವು ಅಭಿವೃದ್ಧಿ ಹೊಂದಿರುವ ಕಾರಣ ಭಾರತದ ಪ್ರತಿಭೆಗಳಿಗೆ ವಿಶ್ವದ ಎಲ್ಲಾ ದೇಶಗಳಲ್ಲಿ ಉತ್ತಮ ಬೇಡಿಕೆ ಇದೆ. ವಿಶ್ವದ ದೊಡ್ಡಣ್ಣ ಎಂದು ಕರೆಯಲ್ಪಡುವ ಅಮೇರಿಕಾ ದೇಶವು ಭಾರತದ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಕಂಡು ಭಯ ಪಡುತ್ತಿದೆ ಇದೇ ರೀತಿ ಆದರೆ ಅಮೇರಿಕಾ ಎಲ್ಲಾ ಉದ್ಯೋಗಾವಕಾಶಗಳನ್ನು ಭಾರತೀಯರು ಪಡೆದುಕೊಳ್ಳಲಿದ್ದಾರೆ ಹಾಗಾಗಿ ಅಮೇರಿಕಾದ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕು ಎಂದು ಈ ಹಿಂದನ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದರು ಇದರಿಂದ ಭಾರತ ಶಿಕ್ಷಣ ವ್ಯವಸ್ಥೆ ಎಷ್ಟು ಗಟ್ಟಿತನದಿಂದ ಕೂಡಿದೆ ಎಂಬುದು ಅರ್ಥವಾಗುತ್ತದೆ ಎಂದು ಅಭಿಪ್ರಾಯಪಟ್ಟ ಮಂಜು ಅವರು ಇದಕ್ಕೆ ಕಾರಣ ನಮ್ಮ ಭಾರತ ದೇಶದ ಶಿಕ್ಷಕ ವೃಂದವಾಗಿದೆ ಹಾಗಾಗಿ ಶಿಕ್ಷಕರನ್ನು ಎಷ್ಟು ಕೊಂಡಾಡಿದರು ಕಡಿಮೆಯೇ ಆಗುತ್ತದೆ ಎಂದರು. ಶಿಕ್ಷಕರು ತಮ್ಮ ಶಿಷ್ಯರನ್ನು ಉತ್ತಮ ವ್ಯಕ್ತಿಯನ್ನಾಗಿಸಲು ತನ್ನಲ್ಲಿರುವ ಸಕಲ ವಿದ್ಯೆಗಳನ್ನು ಹೇಳಿಕೊಡುತ್ತಾರೆ ಅದನ್ನು ವಿದ್ಯಾರ್ಥಿಗಳು ಚೆನ್ನಾಗಿ ಅರ್ಥೈಸಿಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ದಾರಿಯನ್ನು ಕಂಡುಕೊಳ್ಳಬೇಕು. ಅಲ್ಲದೆ ಸಮಾಜ ಮೆಚ್ಚುವಂತಹ ಉತ್ತಮ ನಡಾವಳಿಕೆಗಳನ್ನು ರೂಢಿಸಿಕೊಳ್ಳಬೇಕು. ಮಾನವೀಯ ಮೌಲ್ಯಗಳು, ಅನ್ಯಾಯ, ಅಕ್ರಮಗಳ ವಿರುದ್ಧ ಹೋರಾಟ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಹೆಚ್.ಟಿ.ಮಂಜು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಎಸ್.ಬಿ.ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಜಾನಕೀರಾಂ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಟ್ಟಣದ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ರಮೇಶ್ ಶಿಕ್ಷಕರ ದಿನಾಚರಣೆ ಕುರಿತು ಪ್ರಧಾನ ಉಪನ್ಯಾಸ ನೀಡಿದರು. ಕನ್ನಡ ಉಪನ್ಯಾಸಕ ಎಂ.ಕೆ.ಹರಿಚರಣತಿಲಕ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕರಾದ ನಂಜೇಗೌಡ, ಕೃಷ್ಣಪ್ಪ, ರಾಮಲಿಂಗು, ಗಿರೀಶ್ ಯಲ್ಲೂರು, ಚಂದ್ರಶೇಖರ್, ಹರೀಶ್‍ಬಾಬು ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿದ್ಯಾರ್ಥಿ ಸಿ.ಬಿ.ಚೇತನ್‍ಕುಮಾರ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ವಿನೂತ ನಿರೂಪಿಸಿದರು. ಅಂಜಲಿ ವಂದಿಸಿದರು.

Leave a Comment