ಪರಾರಿಯಾಗಿದ್ದ ವಿಚಾರಣಾಧೀನ ಖೈದಿ ಬಂಧನ

ಕಲಬುರಗಿ,ಫೆ.20-ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಪರಾರಿಯಾಗಿದ್ದ ವಿಚಾರಣಾಧೀನ ಖೈದಿ ರೋಜಾದ ಮಟಕಾ ಮಾಜೀದ್ ತಂದೆ ಖಾಸೀಮ್ ಸಾಬ್ (30) ನನ್ನು ಪೊಲೀಸರು ಇಂದು ಬೆಳಗಿನಜಾವ ಬಂಧಿಸಿದ್ದಾರೆ.

ಆಸ್ಪತ್ರೆಯಿಂದ ಪರಾರಿಯಾಗಿದ್ದ ಮಟಕಾ ಮಾಜೀದ್ ಹೈದ್ರಾಬಾದ್ ಗೆ ಹೋಗಿ ಅಲ್ಲಿಂದ ಕಲಬುರಗಿಗೆ ಬಂದು ಬೇರೆ ಕಡೆ ಹೋಗಲು ಹೊಂಚು ಹಾಕಿದ್ದ. ಇಂದು ಬೆಳಗಿನಜಾವ 3 ಗಂಟೆ ಸುಮಾರಿಗೆ ಪೊಲೀಸರು ಈತನನ್ನು ನಗರದ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ರೋಜಾ ಪಿಐ ಅಸ್ಲಂ ಭಾಷಾ, ಬ್ರಹ್ಮಪುರ ಪಿಐ ಕಪೀಲದೇವ್, ಸಿಬ್ಬಂದಿಗಳಾದ ವೈಜನಾಥ, ಮೋಹಸಿನ್, ಗೋಪಾಲ ಮತ್ತು ಈರಣ್ಣ ಅವರು ಮಟಕಾ ಮಾಜೀದ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತೆಲಂಗಾಣದ ಪರಗಿ, ಜೇವರ್ಗಿ, ಹುಮನಾಬಾದ ಮತ್ತು ರೋಜಾ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ನಾಲ್ಕು ಕಳ್ಳತನ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆಯಷ್ಟೇ ಆತನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಫೆ.16 ರಂದು ರಾತ್ರಿ ಅನಾರೋಗ್ಯದ ಹಿನ್ನೆಲೆಯಲ್ಲಿ ಈತನನ್ನು  ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿ ಆಸ್ಪತ್ರೆಯಿಂದಲೇ ಪರಾರಿಯಾಗಿದ್ದ. ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಟಕಾ ಮಾಜೀದ್ ಪರಾರಿಯಾದುದ್ದರಿಂದ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಮೂವರು ಸಿ.ಎ.ಆರ್.ಪೊಲೀಸ್ ಸಿಬ್ಬಂದಿಯನ್ನು ಅಮಾನತ್ತು ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು..

Leave a Comment