ಪಬ್ ದಾಳಿ ಪ್ರಕರಣ ೨೬ ಮಂದಿ ನಿರ್ದೋಷಿ

ಮಂಗಳೂರು, ಮಾ. ೧೩- ಒಂಬತ್ತು ವರ್ಷಗಳ ಹಿಂದೆ ನಡೆದಿದ್ದ ನಗರದ ಅಮ್ನೇಶಿಯಾ ಪಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳೆಂದು ಗುರುತಿಸಲ್ಪಟ್ಟಿದ್ದ ಶ್ರೀರಾಮ ಸೇನೆಯ ೨೫ ಮಂದಿ ಕಾರ್ಯಕರ್ತರನ್ನು ಮಂಗಳೂರಿನ ೩ನೇ ಜೆಎಂಎಫ್‌ಸಿ ನ್ಯಾಯಾಲಯವು ಖುಲಾಸೆಗೊಳಿಸಿ ಸೋಮವಾರ ತೀರ್ಪು ನೀಡಿದೆ.
ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಸುಭಾಷ್ ಪಡೀಲ್, ಶರತ್ ಪದವಿನಂಗಡಿ, ಲೋಹಿತ್ ಅಡ್ಯಾರ್, ಸುರೇಶ್ ಪಡೀಲ್, ವಿನೋದ್ ನೀರುಮಾರ್ಗ, ದೇವರಾಜ್ ನೀರುಮಾರ್ಗ, ಪವನ್ ಮಂಜೇಶ್ವರ, ಧೀರಜ್ ಮಂಜೇಶ್ವರ, ಹರೀಶ್ ತೋಡಾರ, ಗಣೇಶ್ ಅತ್ತಾವರ, ಸಚಿನ್ ಅತ್ತಾವರ, ದಿನಕರ ಶೆಟ್ಟಿ ಸೇರಿದಂತೆ ೨೫ ಮಂದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಪಬ್ ದಾಳಿ ಪ್ರಕರಣದಲ್ಲಿ ಒಟ್ಟು ೩೦ ಮಂದಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಪೈಕಿ ಮೂವರು ವಿದೇಶಕ್ಕೆ ತೆರಳಿದ್ದರೆ, ಇಬ್ಬರು ಮೃತಪಟ್ಟಿದ್ದಾರೆ.
ಏನಿದು ಪ್ರಕರಣ?
೨೦೦೯ರ ಜ.೨೪ರಂದು ನಗರದ ಅಂಬೇಡ್ಕರ್ ವೃತ್ತ ಬಳಿಯ ಅಮ್ನೇಶಿಯಾ ಪಬ್‌ಗೆ ತಂಡವೊಂದು ದಿಢೀರ್ ದಾಳಿ ನಡೆಸಿತ್ತು. ಈ ತಂಡದ ಸದಸ್ಯರು ಪಬ್‌ನಲ್ಲಿದ್ದ ಯುವಕ, ಯುವತಿಯರನ್ನು ಹೊರಗೆಳೆದು ಹಲ್ಲೆ ನಡೆಸಿ ಅಮಾನವೀಯವಾಗಿ ವರ್ತಿಸಿತ್ತು. ಇದು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಮಾತ್ರವಲ್ಲದೆ ದೇಶಾದ್ಯಂತ ವಿವಿಧ ಕಡೆಗಳಿಂದ ಭಾರೀ ವಿರೋಧವೂ ವ್ಯಕ್ತವಾಗಿದ್ದವು. ಘಟನೆಗೆ ಸಂಬಂಧಿಸಿ ಅಂದು ಪೊಲೀಸರು ೩೦ ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು.ಶ್ರೀರಾಮ ಸೇನೆಯಿಂದ ವಿಜಯೋತ್ಸವ ತೀರ್ಪು ಪ್ರಕಟವಾಗುತ್ತಿದ್ದಂತೆ ಶ್ರೀರಾಮ ಸೇನೆಯ ಕಾರ್ಯಕರ್ತರು ನಗರದ ಆರ್ಯ ಸಮಾಜ ಭವನದ ಮುಂಭಾಗ ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಈ ಸಂದರ್ಭ ಮಾತನಾಡಿದ ಪ್ರಮೋದ್ ಮುತಾಲಿಕ್, ಇದು ಸತ್ಯಕ್ಕೆ ಸಂದ ಜಯವಾಗಿದೆ. ಶ್ರೀರಾಮ ಸೇನೆಯನ್ನು ಟೀಕಿಸಿದವರಿಗೆ ನ್ಯಾಯಾಲಯದ ತೀರ್ಪು ಉತ್ತರ ನೀಡಿದೆ ಎಂದರು. ೨೦೦೯ರಲ್ಲಿ ಘಟನೆ ನಡೆದಾಗ ಬಿಜೆಪಿ ಸರಕಾರ ಅಧಿಕಾರದಲ್ಲಿತ್ತು. ಘಟನೆ ನಡೆದಾಗ ನಾನು ಮಹಾರಾಷ್ಟ್ರದಲ್ಲಿದ್ದೆ. ಜ.೨೬ರಂದು ಬೆಳಗಾವಿಗೆ ಬಂದಾಗ ನನ್ನನ್ನು ಪೊಲೀಸರು ಬಂಧಿಸಿದರು. ೧೬ ದಿನ ಜೈಲಿನಲ್ಲಿದ್ದೆ. ಪಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಆಧಾರವಿಲ್ಲದಿದ್ದರೂ ನನ್ನ ಸಹಿತ ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಲಾಗಿತ್ತು. ಇದೀಗ ತೀರ್ಪು ಹೊರಬಿದ್ದಿದೆ. ವಿನಾಕಾರಣ ಕೇಸು ದಾಖಲಿಸಿದ್ದ ಸರಕಾರದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ವಕೀಲರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುತಾಲಿಕ್ ತಿಳಿಸಿದರು.

Leave a Comment