ಪಪಂ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಸ್ವಾಮೀಜಿ ಪಾದಯಾತ್ರೆ ಪಜಾ, ಪಪಂ ಮೀಸಲಾತಿ ಹೆಚ್ಚಳ ಸಮಿತಿ ಬೆಂಬಲ

ಬಳ್ಳಾರಿ, ಜೂ.17: ಪರಿಶಿಷ್ಟ ಪಂಗಡ ಜನಾಂಗಕ್ಕೆ ಶೇ.7.5 ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ವಾಲ್ಮೀಕಿ ಮಠದ ಸ್ವಾಮೀಜಿ ರಾಚನಹಳ್ಳಿಯಿಂದ ಬೆಂಗಳೂರುವರೆಗೆ ಹಮ್ಮಕೊಂಡಿರುವ ಪಾದಯಾತ್ರೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿ ಭಾಗವಹಿಸಿದ್ದರು.

ರಾಜ್ಯ ಸರಕಾರ ಕೂಡಲೇ ವಾಲ್ಮೀಕಿ ಸಮಾಜಕ್ಕೆ ಶೆ.7.5 ರಷ್ಟು ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕೆಂದು ಚುನಾವಣೆ ಸಂದರ್ಭದಲ್ಲಿ ಮತ ಪಡೆಯಲು ಮಾತ್ರ ಆಮಿಷ ತೋರಿಸುತ್ತಾರೆ. ಅಧಿಕಾರಕ್ಕೆ ಬಂದ ಮೇಲೆ ಸಮಾಜವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವುದು ಸಮಾಜಕ್ಕೆ ಮಾಡಿದ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೀಸಲಾತಿ ಕುರಿತು ನ್ಯಾಯಾಲಯ ರಾಜ್ಯ ಸರಕಾರಕ್ಕೆ ಆದೇಶ ನೀಡಿದ್ದರೂ ಸಹ ರಾಜ್ಯ ಸರಕಾರ ಮಲತಾಯಿ ಧೋರಣೆ ತಾಳಿರುವುದು ಸರಿಯಲ್ಲ. ಕೂಡಲೇ ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ. ಚಂದ್ರಶೇಖರ, ಮುಖಂಡರಾದ ಬಿ. ಶಿವಕುಮಾರ, ಮರಿಸ್ವಾಮಿ, ಬಾಲರಾಜು, ಬಸವರಾಜ, ಎರ್ರಿಸ್ವಾಮಿ, ರಾಜು, ಅಶೋಕಕುಮಾರ್, ವೀರೇಂದ್ರ ಸೇರಿದಂತೆ ಮತ್ತಿತರರು ಇದ್ದರು.

Leave a Comment