ಪಥಸಂಚಲನ ಉಪಹಾರ ಅಸ್ತವ್ಯಸ್ತ: ತಟ್ಟೆ ಬಿಸಾಡಿ ಆಕ್ರೋಶ

ರಾಯಚೂರು.ಆ.13- ಸ್ವಾತಂತ್ರ್ಯೋತ್ಸವ ಪೂರ್ವ ಸಿದ್ಧತೆಯಲ್ಲಿ ಅಮಸಮರ್ಪಕ ಉಪಹಾರ ವ್ಯವಸ್ಥೆಗೆ ಬೇಸತ್ತ ವಿದ್ಯಾರ್ಥಿಗಳು ತಟ್ಟೆ ಹಿಡಿದು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯಿತು.
ವರ್ಷವಾರು ಸ್ವಾತಂತ್ರ್ಯ ದಿನಾಚರಣೆ ನಿಮಿತ್ಯ ಸ್ಥಳೀಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ಯಾಲಯ ಬಳಿಯಿರುವ ಡಿಎಆರ್ ಮೈದಾನದಲ್ಲಿ ವಿದ್ಯಾಥಿಗಳಿಗೆ ಪೂರ್ವ ಸಿದ್ಧತಾ ಪಥಸಂಚಲನ ತರಬೇತಿ ನೀಡುವುದು ವಾಡಿಕೆ. 72 ನೇ ಸ್ವಾತಂತ್ರ್ಯೋತ್ಸವ ಪೂರ್ವ ತಯಾರಿ ನಿಮಿತ್ಯ ಸುಮಾರು 400 ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಬೆಳಗಿನ ಜಾವದಿಂದಲೇ ಪಥ ಸಂಚಲನದಲ್ಲಿ ಭಾಗವಹಿಸಿರುವ ಮಾಹಿತಿ ಅರೆತರೂ ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಮಾತ್ರ ಸಕಾಲಕ್ಕೆ ಉಪಹಾರ ವ್ಯವಸ್ಥೆಗೆ ಎಚ್ಚೇಳದ ಹಿನ್ನೆಲೆ ಹಸಿವಿನಿಂದ ಬೇಸತ್ತ ವಿದ್ಯಾರ್ಥಿಗಳು ಕನಿಷ್ಠ ಅಲ್ಪ ಉಪಹಾರವಿಲ್ಲದೇ ರೊಚ್ಚಿಗೆದ್ದು ಮೈದಾನ ಆವರಣದಲ್ಲಿಯೇ ತಟ್ಟೆ ಬಿಸಾಡಿ ಹಿಂದಿರುಗಿರುವುದು ತರಬೇತುದಾರರನ್ನು ವಿಚಲಿತಗೊಳ್ಳುವಂತೆ ಮಾಡಿತು.
ಸ್ವಾತಂತ್ರ್ಯೋತ್ಸವ ಪಥ ಸಂಚಲನದಲ್ಲಿ ಭಾಗಿಯಾಗುವ ಸುಮಾರು 400 ವಿದ್ಯಾರ್ಥಿಗಳು ಸೇರಿದಂತೆ ತರಬೇತುದಾರರಿಗೆ ಸಮರ್ಪಕ ಉಪಹಾರ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ನಗರಸಭೆಯಲ್ಲಿ ಕಾರ್ಯನಿರ್ವಹಿಸುವ ಶಕೀಲ್ ಎನ್ನುವವರಿಗೆ ವಹಿಸಲಾಗಿತ್ತು ಎನ್ನಲಾಗಿದೆ. ಕಾಟಾಚಾರದ ಅಸಮರ್ಪಕ ಉಪಹಾರ ವ್ಯವಸ್ಥೆಯಿಂದಾಗಿ, ಅಲ್ಪ ಉಪಹಾರವೂ ದೊರೆಯದೇ ತೀವ್ರ ಆಕ್ರೋಶಭರಿತರಾದ 100 ಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳು ಪಥ ಸಂಚಲನ ಬಹಿಷ್ಕರಿಸಿ, ತರಬೇತುದಾರರಿಗೆ ಹಿಡಿಶಾಪ ಹಾಕಿರುವುದು ಉಪಹಾರ ಜವಾಬ್ದಾರಿವಹಿಸಿಕೊಂಡ ನಗರಸಭೆ ಅಧಿಕಾರಿಗಳನ್ನೇ ತಲೆ ತಗ್ಗಿಸುವಂತೆ ಮಾಡಿತು.

Leave a Comment