ಪತ್ರಿಕೋದ್ಯಮ ಅಭಿವೃದ್ಧಿಗೆ ಪೂರಕವಾಗಲಿ

ತುಮಕೂರು, ಸೆ. ೭- ಪತ್ರಿಕೋದ್ಯಮ ಸಮಾಜದ ಓರೆಕೋರೆಗಳನ್ನು ತಿದ್ದಿ ಅಭಿವೃದ್ಧಿಗೆ ಪೂರಕವಾಗಬೇಕು. ಭವಿಷ್ಯದ ಪತ್ರಕರ್ತರು ನೈಜತೆಯನ್ನು ಎತ್ತಿ ಹಿಡಿಯುವುದನ್ನು ತಮ್ಮ ಗುರಿಯಾಗಿಸಿಕೊಳ್ಳಬೇಕು ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಹಾಗೂ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ‘ಕ್ಯಾಂಪಸ್ ಸುದ್ದಿ’ ಮತ್ತು‘ಕಲ್ಪತರು ಟೈಮ್ಸ್’ ಪ್ರಾಯೋಗಿಕ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದ 3 ಮೂಲ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ಆಯಾ ಕ್ಷೇತ್ರಕ್ಕೆ ಸೀಮಿತವಾಗಿ ಕಾರ್ಯನಿರ್ವಹಿಸುತ್ತವೆ. ಆದರೆ, ಪತ್ರಿಕೋದ್ಯಮ ಎಲ್ಲ ಕ್ಷೇತ್ರಕ್ಕೂ ಸಂಬಂಧಿಸಿದ್ದು, ಸದಾ ಜಾಗೃತವಾಗಿರುವ ಅಂಗವೂ ಹೌದು. ಪತ್ರಿಕೋದ್ಯಮ ಸಾಕ್ಷಿ ಆಧಾರಿತ ಕಾರ್ಯವಾಗಿದ್ದು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಕೊಠಡಿಯೊಳಗಿನ ಪಾಠಕ್ಕಿಂತಲೂ ಹೆಚ್ಚಾಗಿ ಪ್ರಾಯೋಗಿಕ ಕಾರ್ಯಗಳಲ್ಲಿ ತೊಡಗಬೇಕು ಎಂದರು.

‘ಹೊಸ ಕಾಲದ ಪತ್ರಿಕೋದ್ಯಮ ಬಯಸುವ ಕೌಶಲಗಳು’ ಕುರಿತು ಉಪನ್ಯಾಸ ನೀಡಿದ ಪತ್ರಕರ್ತ ಉಗಮ ಶ್ರೀನಿವಾಸ್, ಪತ್ರಿಕೋದ್ಯಮದ ಪ್ರವೃತ್ತಿ ಬದಲಾಗುತ್ತಿದೆ. ಹೀಗಾಗಿ ಇಂದಿನ ವಿದ್ಯಾರ್ಥಿಗಳು ಹೊಸ ತಲೆಮಾರಿನ ಪತ್ರಿಕೋದ್ಯಮ ಅಂದರೆ ಆನ್‌ಲೈನ್ ಪತ್ರಿಕೋದ್ಯಮಕ್ಕೆ ಅಗತ್ಯವಿರುವ ಕೌಶಲಗಳನ್ನು ಹೊಂದಲೇಬೇಕಾದ ಅನಿವಾರ್ಯತೆ ಇದೆ ಎಂದರು.

ಇದು ನಾಗರಿಕ ಪತ್ರಿಕೋದ್ಯಮದ ಕಾಲ. ಸ್ಮಾರ್ಟ್‌ಫೋನ್ ಹೊಂದಿದವರೆಲ್ಲ ಒಂದರ್ಥದಲ್ಲಿ ಪತ್ರಕರ್ತರೇ. ಹೀಗಾಗಿ ಪತ್ರಿಕೋದ್ಯಮ ಸದಾ ಹೊಸದನ್ನು ಹೇಳಬೇಕಾದ ಸವಾಲನ್ನು ಎದುರಿಸುತ್ತಿದೆ. ಈ ಸವಾಲನ್ನು ನಿರ್ವಹಿಸಬಲ್ಲವರು ಮಾತ್ರ ಯಶಸ್ವಿ ಪತ್ರಕರ್ತರಾಗಬಲ್ಲರು ಎಂದು ವಿಶ್ಲೇಷಿಸಿದರು.

ಪತ್ರಿಕೆಗಳ ಒಟ್ಟಾರೆ ಉತ್ಪಾದನಾ ವೆಚ್ಚ ಏರುತ್ತಿದೆ. ಓದುಗರನ್ನು ಐದು ನಿಮಿಷಕ್ಕಿಂತ ಹೆಚ್ಚು ಒಂದು ಪತ್ರಿಕೆ ಹಿಡಿದಿಡುವುದೇ ದೊಡ್ಡ ಸಾಹಸವೆನಿಸಿದೆ. ಇನ್ನೇನಿದ್ದರೂ ಆನ್‌ಲೈನ್ ಪತ್ರಿಕೆಗಳ ಕಾಲ. ಯುವ ಪತ್ರಕರ್ತರು ಹೊಸ ಸಾಧ್ಯತೆಗಳಿಗೆ ತಮ್ಮನ್ನು ತೆರೆದುಕೊಳ್ಳಬೇಕು ಎಂದರು.

ಭಾಸ್ಕರ ಅಕಾಡೆಮಿ ತರಬೇತುದಾರ ಆರ್. ಚಂದ್ರಮೋಹನ್, ಉದ್ಯೋಗ ಜಗತ್ತಿಗೆ ಅಗತ್ಯವಾದ ಸಂವಹನ ಕೌಶಲಗಳ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲರಾದ ಕೆ. ರಾಮಚಂದ್ರಪ್ಪ ವಹಿಸಿದ್ದರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯೋಜಕ ಸಿಬಂತಿ ಪದ್ಮನಾಭ ಕೆ.ವಿ., ಪತ್ರಿಕೋದ್ಯಮ ಉಪನ್ಯಾಸಕರಾದ ದೇವರಾಜು ಸಿ., ಕೋಕಿಲ ಎಂ. ಎಸ್.,  ಭಾನುಪ್ರಸಾದ್ ಕೆ.ಎನ್. ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Comment