ಪತ್ರಕರ್ತ ಪುತ್ರನ ಶವ ಪತ್ತೆ

ನಲಂದಾ (ಬಿಹಾರ), ಏ. ೧೬: ಬಿಹಾರದ ನಲಂದಾದಲ್ಲಿ ಭಾನುವಾರ ನಾಪತ್ತೆಯಾಗಿದ್ದ ೧೬ ವರ್ಷದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಅಶ್ವನಿ ಕುಮಾರ್ ಅಲಿಯಾಸ್ ಚುನ್ನು ಹೆಸರಿನ ಈ ಬಾಲಕನು ಸ್ಥಳೀಯ ಪತ್ರಕರ್ತ ಅಶುತೋಷ್ ಕುಮಾರ್ ಆರ್ಯ ಎಂಬುವರ ಪುತ್ರನಾಗಿದ್ದಾನೆ.

ನಲಂದಾ ಪೊಲೀಸ್ ಅಧೀಕ್ಷಕ ನೀಲೇಶ್ ಕುಮಾರ್ ನೀಡಿರುವ ಹೇಳಿಕೆ ಪ್ರಕಾರ, ಚುನ್ನು ಶವ ಪತ್ತೆಯಾದಾಗ ಅವನ ಕಣ್ಣುಗಳಲ್ಲಿ ರಕ್ತ ಸೋರಿದ್ದು ಕಂಡುಬಂದಿದೆ. ಪ್ರಕರಣವನ್ನು ಎಲ್ಲ ಮೂಲಗಳಿಂದಲೂ ಶೋಧಿಸಲಾಗುತ್ತಿದ್ದು ಸದ್ಯದಲ್ಲೇ ವರದಿ ಬಂದ ನಂತರ ವಿಷಯ ತಿಳಿಸಲಾಗುವುದು ಎಂದಿದ್ದಾರೆ.

ಚುನ್ನು ಭಾನುವಾರ ಆಟವಾಡಲೆಂದು ಮನೆಯಿಂದ ಹೊರಹೋದಾಗ ಮಧ್ಯಾಹ್ನ ೨ ಗಂಟೆ ವೇಳೆಗೆ ನಾಪತ್ತೆಯಾಗಿದ್ದಾನೆ. ಸಂಜೆಯಾದರೂ ಬಾಲಕ ಮನೆಗೆ ಬಾರದ ಕಾರಣ ಆತನಿಗಾಗಿ ವಿಫಲ ಹುಡುಕಾಟ ನಡೆಸಿದ ಬಳಿಕ ಆತನ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ಈ ಸಂಬಂಧ ಸೋಮವಾರ ಐವರನ್ನು ಬಂಧಿಸಲಾಗಿದ್ದು ಅವರನ್ನೂ ಸಹ ಸ್ಪಷ್ಟವಾಗಿ ಗುರುತಿಸಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

“ನಾನು ಸ್ಥಳಕ್ಕೆ ಧಾವಿಸಿದಾಗ ಕಣ್ಣುಗಳಲ್ಲಿ ರಕ್ತ ಸೋರಿಸಿಕೊಂಡು ಬಿದ್ದಿದ್ದ ಅವನನ್ನು ಕಂಡೆ; ಕೂಡಲೇ ಅವನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಆತ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದರು” ಎಂದು ಚುನ್ನು ತಂದೆ ಹಾಗೂ ಹಿಂದೂಸ್ತಾನ್ ದಿನ ಪತ್ರಿಕೆಯ ನಲಂದ ಬ್ಯೂರೋ (ಮುಖ್ಯ ಕಚೇರಿ) ಮುಖ್ಯಸ್ಥರೂ ಆದ ಆರ್ಯ ಹೇಳಿಕೆ ನೀಡಿದ್ದಾರೆ.

ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಚುನ್ನು ಸಾವಿಗೆ ನಿಖರ ಕಾರಣ ತಿಳಿಯಲಿದೆ. ಕಣ್ಣುಗಳನ್ನು ಹೊರತುಪಡಿಸಿ ಆತನ ದೇಹದ ಇತರ ಯಾವುದೇ ಭಾಗದಲ್ಲೂ ಗಾಯಗಳಾಗಿಲ್ಲ ಎಂದು ಎಸ್‌ಪಿ ನೀಲೇಶ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಕೇಂದ್ರ ವಲಯ ಡಿಐಜಿ ರಾಜೇಶ್‌ಕುಮಾರ್ ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿದ್ದ ಭಾರತೀಯ ಉತ್ಪಾದನೆಯ ವಿದೇಶೀ ಮದ್ಯದ ಖಾಲಿ ಬಾಟಲಿಗಳು, ಬಳಸಿ ಬಿಸಾಡುವ ಲೋಟಗಳು ಮತ್ತು ಕುರುಕಲು ತಿಂಡಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Leave a Comment