ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

ತುಮಕೂರು, ಜೂ. ೧೨- ಬಾಯ್ಲರ್ ಸ್ಫೋಟ ವಿಚಾರವಾಗಿ ಸುದ್ದಿ ಮಾಡಲು ತೆರಳಿದ್ದ ಖಾಸಗಿ ವಾಹಿನಿಗಳ ವರದಿಗಾರರು ಮತ್ತು ಕ್ಯಾಮರಾಮನ್‌ಗಳ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಟೌನ್‌ಹಾಲ್ ವೃತ್ತದಲ್ಲಿ ಜಮಾಯಿಸಿದ ಪತ್ರಕರ್ತರು ಬೇಳೂರು ಬಾಯಱ್ಸ್ ಬಯೋಟೆಕ್ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಅಶೋಕ ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆಯಲ್ಲಿ ತೆರಳಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿನಿತ್ಯ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಸಾಮಾಜಿಕ ಕರ್ತವ್ಯ ನಿರ್ವಹಿಸುವ ಮಾಧ್ಯಮ ಪ್ರತಿನಿಧಿಗಳ ಮೇಲೆ ಪದೇ ಪದೇ ಹಲ್ಲೆ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಪತ್ರಕರ್ತರಿಗೆ ರಕ್ಷಣೆ ಇಲ್ಲದೇ ಹೋದರೆ ತಮ್ಮ ಕರ್ತವ್ಯ ನಿರ್ವಹಿಸುವುದು ತುಂಬಾ ಕಷ್ಟಕರವಾಗಲಿದೆ. ಕೂಡಲೇ ಈ ಅಮಾನುಷ್ಯ ದುಷ್ಟರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಲೇಬೇಕು ಎಂದು ಪ್ರತಿಭಟನಾನಿರತ ಪತ್ರಕರ್ತರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.

ಪತ್ರಕರ್ತರು ತಮ್ಮ ಜೀವದ ಹಂಗನ್ನು ತೊರೆದು ಅಕ್ರಮ, ಅನ್ಯಾಯ, ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವಲ್ಲಿ ಮುಂದಾಗುತ್ತಾರೆ. ಆದರೆ ಕೆಲ ಪಟ್ಟಭದ್ರರು, ದುಡ್ಡಿನ ಮದ ಇರುವವರು ಪತ್ರಕರ್ತರ ಕೆಲಸವನ್ನು ಹತ್ತಿಕುವ ನಿಟ್ಟಿನಲ್ಲಿ ಇಂಥ ಅಮಾನುಷ ಕೃತ್ಯಕ್ಕೆ ಮುಂದಾಗುತ್ತಾರೆ. ಆದ್ದರಿಂದ ಹಲ್ಲೆ ನಡೆಸಿರುವ ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಸಹ ಯಾವುದಕ್ಕೂ ಮಣೆ ಹಾಕದೆ ಅವರುಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ. ಪುರುಷೋತ್ತಮ್, ಜಯಣ್ಣ, ಹಿರಿಯ ಪತ್ರಕರ್ತ ಪುರುಷೋತ್ತಮ್ ಮತ್ತಿತರರು ಮಾತನಾಡಿದರು.

Leave a Comment