ಪತ್ರಕರ್ತರಿಗೆ ಸಿ, ಡಿ ದರ್ಜೆ ನೌಕರರ ವೇತನ ನಿಗದಿಗೆ ಆಗ್ರಹ

ಹುಕ್ಕೇರಿ,ಆ9: ನಮ್ಮ ಸಮಾಜದ ಅಭಿವೃದ್ಧಿಯಲ್ಲಿ ಪತ್ರಿಕೆ ಹಾಗೂ ಪತ್ರಕರ್ತರ ಪಾತ್ರ ಪ್ರಮುಖವಾಗಿದೆ. ಸಮಾಜ ಹಾಗು ಸರ್ಕಾರದ ನಡುವೆ ಸಂಪರ್ಕದ ಸೇತುವೆಯಂತೆ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ಸಿ ಅಥವಾ ಡಿ ದರ್ಜೆಯ ನೌಕರರಿಗೆ ನೀಡುವ ವೇತನ ನಿಗದಿಪಡಿಸಬೇಕು ಎಂದು ಮಾಜಿ ಸಂಸದರೂ ಆದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಸರ್ಕಾರವನ್ನು ಆಗ್ರಹಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ನಡೆದ ಪತ್ರಿಕಾ ದಿನಾಚರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಅಭಿವೃದ್ಧಿಯಲ್ಲಿ ಪತ್ರಿಕೆ ಹಾಗೂ ಪತ್ರಕರ್ತರ ಪಾತ್ರ ಪ್ರಮುಖವಾಗಿದೆ. ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಿಗೆ ಸರ್ಕಾರಿ ನೌಕರರಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಅವರು ಹೇಳಿದರು.

ಇಂದಿನ ಡಿಜಿಟಲ್ ಯುಗದಲ್ಲಿ ಪತ್ರಿಕೆಗಳನ್ನು ಖರೀದಿಸಿ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇದರಿಂದ ಮುದ್ರಣ ಮಾಧ್ಯಮ ಕ್ಷೇತ್ರಕ್ಕೆ ಹಿನ್ನಡೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದಕ್ಕೆ ದಿನದಿಂದ ದಿನಕ್ಕೆ ಬೆಳೆಯುವ ತಂತ್ರಜ್ಞಾನವೇ ಪ್ರಮುಖ ಕಾರಣವಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಸಮಾಜದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.

ವಾಸ್ತವ ವರದಿಗಳನ್ನು ಮಾಡುವ ಮೂಲಕ ಪತ್ರಕರ್ತರು ಸರ್ಕಾರ ಮತ್ತು ಚುನಾಯಿತ ಪ್ರತಿನಿಧಿಗಳನ್ನು ಎಚ್ಚರಿಸಬೇಕು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪತ್ರಿಕೆಯಲ್ಲಿ ಪ್ರಕಟವಾಗುವ ವರದಿಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ಜತೆಗೆ ಪತ್ರಿಕಾ ವರದಿಯ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಪ್ರಾಮಾಣಿಕವಾಗಿ ನಿಭಾಯಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಸನ್ಮಾನ : ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಇಸ್ಲಾಂಪುರ ವಸತಿ ಶಾಲೆ ಅಡುಗೆ ಸಿಬ್ಬಂದಿ ಸುಖದೇವ ಬೈರಣ್ಣವರ, ನೇಗಿನಹಾಳದ ಹೈನುಗಾರಿಕೆ ರೈತ ಮಹಿಳೆ ಅಕ್ಕಾತಾಯಿ ಕುರಣಿ, ಹುಕ್ಕೇರಿಯ ಚಿತ್ರಕಲಾ ಶಿಕ್ಷಕ ಎಂ.ಜಿ.ಮಕಾನದಾರ, ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಎಂ.ಸಿ.ವಿಜಾಪುರೆ, ನಿವೃತ್ತ ಎಎಸ್‍ಐ ಶಂಕರ ಕೋಳಿ, ನಿವೃತ್ತ ತಹಸೀಲದಾರ ಎ.ಐ.ಅಕ್ಕಿವಾಟೆ, ಸಂಗೀತ ಶಿಕ್ಷಕ ನಿರಂಜನ ಬಡಿಗೇರ, ಕಡಹಟ್ಟಿ ಅಡುಗೆ ಸಹಾಯಕಿ ಸುನೀತಾ ಮುನ್ನೋಳಿ, ಶಿಕ್ಷಣ ಇಲಾಖೆಯ ಎಂ.ಎಸ್.ಪಾಟೀಲ, ಪೌರ ಕಾರ್ಮಿಕರಾದ ಅರ್ಜುನ ಮಾದರ, ಜಯಶ್ರೀ ಬೈರಣ್ಣವರ, ವೈದ್ಯ ಸಚೀನ ಮಿಶ್ರಿಕೋಟಿ ಅವರನ್ನು ಸನ್ಮಾನಿಸಲಾಯಿತು.

ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿರಕ್ತಮಠದ ಶಿವಬಸವ ಸ್ವಾಮೀಜಿ, ತಹಸೀಲದಾರ ಕೆ.ಕೆ.ಬೆಳವಿ, ಪತ್ರಕರ್ತರ ಬಳಗದ ಅಧ್ಯಕ್ಷ ಸಂಜು ಮುತಾಲಿಕ, ಸಿಪಿಐ ಪ್ರಭು ಗಂಗನಹಳ್ಳಿ, ಪುರಸಭೆ ಅಧ್ಯಕ್ಷ ಜಯಗೌಡ ಪಾಟೀಲ, ಬಸವರಾಜ ಮರಡಿ ಮತ್ತಿತರರು ವೇದಿಕೆಯಲ್ಲಿದ್ದರು.

ಶ್ರೀಶೈಲ ಹಿರೇಮಠ ನಿರೂಪಿಸಿದರು. ಪ್ರೊ.ಪಿ.ಜಿ.ಕೊಣ್ಣೂರ ಸ್ವಾಗತಿಸಿದರು. ಮಹಾದೇವ ನಾಯಿಕ ವಂದಿಸಿದರು. ಪತ್ರಕರ್ತರಾದ ಬಸವರಾಜ ಕೊಂಡಿ, ಚೇತನ ಹೊಳೆಪ್ಪಗೋಳ, ರವಿ ಕಾಂಬಳೆ, ವಿಶ್ವನಾಥ ನಾಯಿಕ, ರಾಜು ಅಮ್ಮಣಗಿ, ಚಂದ್ರಶೇಖರ ಚಿನಕೇಕರ, ರಾಮಣ್ಣಾ ನಾಯಿಕ, ಅಪ್ಪು ಹುಕ್ಕೇರಿ, ಸುರೇಶ ಕಿಲ್ಲೆದಾರ, ಸಚೀನ ಖೋತ, ಮಲ್ಲಿಕಾರ್ಜುನ ಗುಂಡಕಲ್ಲೆ, ಸಿದ್ರಾಮ ಮುತ್ತೂರ ಮತ್ತಿತರರು ಉಪಸ್ಥಿತರಿದ್ದರು.

Leave a Comment