ಪತ್ನಿ ಕಾಜೊಲ್, ಪುತ್ರಿ ನೈಸಾ ಆರೋಗ್ಯವಾಗಿದ್ದಾರೆ; ಅಜಯ್ ದೇವಗನ್

 
ಮುಂಬೈ, ಮಾ 31- ಪತ್ನಿ ಕಾಜೋಲ್, ಪುತ್ರಿ ನೈಸಾ ಆರೋಗ್ಯವಾಗಿದ್ದಾರೆ ಎಂದು ಬಾಲಿವುಡ್ ನಾಯಕ ನಟ ಅಜಯ್ ದೇವಗನ್ ಮಂಗಳವಾರ ಟ್ವೀಟ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ಮಹಾಮಾರಿ ಜಗತ್ತಿನೆಲ್ಲೆಡೆ ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ಯಾವುದೇ ವದಂತಿ ಹಬ್ಬಿಸಬಾರದು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಕೋವಿಡ್ -೧೯ ನಿಯಂತ್ರಣ ಕ್ರಮಗಳ ಭಾಗವಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಹಾಗಾಗಿ ಎಲ್ಲ ಚಲನಚಿತ್ರ ಸೆಲೆಬ್ರೆಟಿಗಳು ಮನೆಯಲ್ಲೇ ಠಿಕಾಣಿ ಹೂಡಿ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಆಗಾಗ್ಗೆ ಕುಟುಂಬ ಸದಸ್ಯರೊಂದಿಗಿನ ತಮ್ಮ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ಈ ಕ್ರಮವಾಗಿ ಕಾಜೋಲ್ ಜೊತೆ ಇರುವ ತನ್ನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಜಯ್ ದೇವಗನ್ ಪೋಸ್ಟ್ ಮಾಡಿದ್ದರು. ಈ ಪೈಕಿ ಕಾಜೋಲ್, ಪುತ್ರಿ ನೈಸಾ ಜೊತೆ ಮುಂಬೈ ವಿಮಾನ ನಿಲ್ದಾಣದಿಂದ ಹೊರಗೆ ಬರುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಸಿಂಗಪೂರದಲ್ಲಿ ಶಿಕ್ಷಣ ಪಡೆಯುತ್ತಿರುವ ನೈಸಾಳನ್ನು ಬರಮಾಡಿಕೊಳ್ಳಲು ಕಾಜೋಲ್ ಅಲ್ಲಿಗೆ ತೆರಳಿದ್ದರು. ಜಗತ್ತಿನಾದ್ಯಂತ ಕೊರೊನಾ ವ್ಯಾಪಿಸಿರುವ ಹಿನ್ನಲೆಯಲ್ಲಿ ನೈಸಾ ಮಾರಣಾಂತಿಕ ಸೋಂಕಿಗೆ ಒಳಗಾಗಿದ್ದು, ಕಾಜೊಲ್ ಗೂ ಕೂಡ ಸೋಂಕು ತಗುಲಿದೆ ಎಂಬ ವದಂತಿಗಳು ವ್ಯಾಪಕವಾಗಿ ಹಬ್ಬಿದ್ದವು.
ಈ ವದಂತಿಗಳಿಗೆ ಸ್ಪಂದಿಸಿರುವ ಅಜಯ್ ದೇವಗನ್, “ ನೀವು ಈ ಕುರಿತು ಕೇಳುತ್ತಿರುವುದಕ್ಕೆ ಧನ್ಯವಾದಗಳು, ಕಾಜೊಲ್, ನೈಸಾ ಚೆನ್ನಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಈ ವದಂತಿಗಳು ಆಧಾರ ರಹಿತ ಎಂದು ಟ್ವೀಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ. ಹಲ್ಚಲ್, ಗೂಂಡರಾಜ್, ಇಷ್ಕ್, ರಾಜು ಚಾಚಾ ಮತ್ತಿತರ ಹಿಂದಿ ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ್ದ ಕಾಜೋಲ್-ಅಜಯ್ ದೇವಗನ್ ೧೯೯೯ ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಪುತ್ರಿ ನೈಸಾ, ಪುತ್ರ ಯುಗ್ ಎಂಬ ಮಕ್ಕಳಿದ್ದಾರೆ.

Leave a Comment