ಪತ್ನಿಯ ಸಾವಿನ ಸುದ್ದಿ ಕೇಳಿ ನೇಣಿಗೆ ಶರಣಾದ ಪತಿ

ವಿಜಯಪುರ: ಪತ್ನಿಯ ಸಾವಿನ ಸುದ್ದಿ ಕೇಳಿ ಪತಿ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಸಮೀಪದ ಹೊಳಿಸಂಖ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಗ್ರಾಮದ ರೈತ ಜಗದೇವ ಮನಗೇನಿ ಕೋಳಿ (38) ಎಂದು ಗುರುತಿಸಲಾಗಿದೆ.: ಮೃತ ಜಗದೇವನಿಗೆ ವಿವಾಹವಾಗಿ 18 ವರ್ಷ ಕಳೆದರೂ ಕೂಡ ಸಂತಾನ ಪ್ರಾಪ್ತಿಯಾಗಿರಲಿಲ್ಲ. ಅಲ್ಲದೆ, ವಿಪರೀತ ಮದ್ಯ ಸೇವನೆಯ ಚಟ ಅಂಟಿಸಿಕೊಂಡಿದ್ದ ಈತ ಮದ್ಯ ಸೇವಿಸಿ ಮನೆಗೆ ಬಂದು ಪತ್ನಿಯ ಜೊತೆ ದಿನಂಪ್ರತಿ ಜಗಳವಾಡುತ್ತಿದ್ದ. ಇದರಿಂದ ಬೇಸತ್ತ ಪತ್ನಿ ಭೀಮಾಬಾಯಿಯು ಕಳೆದ ಏ. 5 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಗ ಅವಳನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಏ. 13 ರಂದು ಅವಳು ನಿಧನ ಹೊಂದಿದ್ದಳು. ಪತ್ನಿಯು ನಿಧನ ಹೊಂದುವದಕ್ಕಿಂತ ಒಂದು ದಿನ ಮುಂಚೆ ಅಂದರೆ, ಏ. 12 ರಂದು ಸಮೀಪದ ಹಾವಿನಾಳ ಕ್ರಾಸ್ ಹತ್ತಿರ ಸಂಭವಿಸಿದ ಬೈಕ್ ಅಪಘಾತದಲ್ಲಿ ಜಗದೇವನಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಆತನನ್ನು ಸೋಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ಪತಿ ಜಗದೇವನಿಗೆ ಕುಟುಂಬಸ್ಥರು ಪತ್ನಿಯ ಸಾವಿನ ಸುದ್ದಿ ತಿಳಿಸಿರಲಿಲ್ಲ. ಏ. 19 ರಂದು ಆಸ್ಪತ್ರೆಯಿಂದ ಮನೆಗೆ ತೆರಳಿದ ಜಗದೇವನಿಗೆ ಪತ್ನಿಯು ಸಾವನ್ನಪ್ಪಿರುವ ಬಗ್ಗೆ ಕುಟುಂಬಸ್ಥರಿಂದ ತಿಳಿದು ಬಂದಿದೆ. ಪತ್ನಿಯ ಸಾವಿನ ಸುದ್ದಿ ಕೇಳಿ ಆಘಾತಗೊಂಡ ಜಗದೇವನು ತನ್ನ ಮನೆಯ ಪತ್ರಾಸ್ ಶೆಡ್‍ನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತ ಜಗದೇವನ ತಾಯಿ ಇಂದಿರಾಬಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ಚಡಚಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Leave a Comment